ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳಡಿ ಬಡವರಿಗೆ ನಿರ್ಮಿಸುವ ಮನೆಗಳಿಗೆ ಶೇಕಡಾ 18 ರಷ್ಟು ಜಿಎಸ್ ಟಿ ತೆರಿಗೆ ರದ್ದುಗೊಳಿಸುವಂತೆ ಕೋರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಶೀಘ್ರವೇ ಭೇಟಿ ಮಾಡಲಾಗುವುದು ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಮಂಗಳವಾರ ಹೇಳಿದರು.
ವಿವಿಧ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಸ್ತಾವನೆಗಳ ಕುರಿತು ವಿಧಾನಸೌಧದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ವಸತಿ , ವಕ್ಪ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವರಾದ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅವರು ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಹೀಗೆ ಹೇಳಿದರು.
ಶೇಕಡಾ 18ರಷ್ಟು ಜಿ.ಎಸ್.ಟಿ.ಯಿಂದಾಗಿ ಮನೆ ನಿರ್ಮಾಣಕ್ಕೆ ಫಲಾನುಭವಿಗಳು ತಲಾ ಒಂದೂವರೆ ಲಕ್ಷ ರೂಪಾಯಿ ಪಾವತಿಸಬೇಕಾಗುತ್ತಿದೆ. ಇದು ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಹೊರೆಯಾಗಿ ಪರಿಣಾಮಿಸಿದ್ದು, ಅಧಿಕ ಹಣ ಪಾವತಿ ಸಾಧ್ಯವಾಗುತ್ತಿಲ್ಲ ಹೀಗಾಗಿ ಬಡವರ ಮನೆ ನಿರ್ಮಾಣಕ್ಕೆ ವಿಧಿಸುತ್ತಿರುವ ಜಿ.ಎಸ್.ಟಿ. ತೆರಿಗೆ ರದ್ದುಗೊಳಿಸಬೇಕಾದ ತುರ್ತು ಅಗತ್ಯವಿರುವುದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕಿದೆ ಎಂದು ಸಚಿವ ಜಮೀರ್ ಅವರು ಸಭೆಯಲ್ಲಿ ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಯಚಂದ್ರ ಅವರು, ಈ ಬಗ್ಗೆ ಪ್ರಧಾನಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ಇಡೀ ದೇಶದ ಬಡ ಜನತೆಗೆ ಅನುಕೂಲವಾಗುವಂತಹ ನಿರ್ಧಾರ ತೆಗೆದುಕೊಳ್ಳುವಂತೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ರಾಜ್ಯದಲ್ಲಿ ಒಟ್ಟು 2865 ಕೊಳೆಗೇರಿಗಳಿದ್ದು, ಆ ಪೈಕಿ 635 ಕೊಳಗೇರಿಗಳು ಬೆಂಗಳೂರಿನಲ್ಲಿ ಇವೆ. ಕೊಳೆಗೇರಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರಕ್ಕೆ 3,682 ಕೋಟಿ ಹಣ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಈ ಬಗ್ಗೆ ಕೇಂದ್ರ ವಸತಿ ಹಾಗೂ ಕೊಳೆಗೇರಿ ಮಂಡಳಿ ಸಚಿವರ ಗಮನ ಸೆಳೆಯಲು ಕೂಡ ಸಭೆಯಲ್ಲಿ ನಿರ್ಧರಿಸಲಾಯಿತು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ರಾಜ್ಯದಲ್ಲಿ 45,124 ಮನೆ ನಿರ್ಮಿಸುವ ಗುರಿಯಿದ್ದು, ಇದರಲ್ಲಿ 8287 ಮನೆಗಳ ನಿರ್ಮಾಣ ಮುಗಿದಿದೆ. ಇನ್ನು, 31,626 ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಈ ಯೋಜನೆಯಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರಿನ ಸಂಪರ್ಕ ವಿದ್ಯುತ್ ಸಂಪರ್ಕ, ಒಳಚರಂಡಿ ಹಾಗೂ ಎಸ್.ಟಿ.ಪಿ. ಒದಗಿಸಲು ಸಾಧ್ಯವಾಗುತ್ತಿಲ್ಲವಾದ್ದರಿಂದ ನಿರ್ಮಾಣಗೊಂಡಿರುವ ಮನೆಗಳಿಗೆ ಫಲಾನುಭವಿಗಳು ಹೋಗುತ್ತಿಲ್ಲ ಎಂಬ ಬಗ್ಗೆ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಯೋಜನೆಗಳ ಚರ್ಚೆ ವೇಳೆ ಗಮನಕ್ಕೆ ತರಲಾಯಿತು.
ಈ ಯೋಜನೆಗೆ ವಿಶೇಷವಾಗಿ ಈ ಮೇಲ್ಕಂಡ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕೇಂದ್ರ ಸರ್ಕಾರ ರೂ. 660 ಕೋಟಿ ಹಣ ಬಿಡುಗಡೆ ಮಾಡಬೇಕೆಂದು ದೆಹಲಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದು ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವಂತೆ ಗಮನಹರಿಸಬೇಕಿದೆ ಎಂದು ಸಭೆ ಅಭಿಪ್ರಾಯಪಟ್ಟಿತು.
ರಾಜ್ಯದೆಲ್ಲೆಡೆ ಅಲ್ಪಸಂಖ್ಯಾತರ ಕಾಲೊನಿಗಳ ಅಭಿವೃದ್ಧಿಗೆ ಜಿಲ್ಲಾ ಹಾಗೂ ತಾಲ್ಲೂಕುವಾರು 171 ಹೊಸ ಪ್ರಸ್ತಾವನೆಗಳನ್ನ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದಕ್ಕಾಗಿ 60: 40 ಹಂಚಿಕೆ ಸೂತ್ರದಲ್ಲಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದರೆ ಅಲ್ಪಸಂಖ್ಯಾತರ ಕಾಲೊನಿಗಳನ್ನು ಅಭಿವೃದ್ಧಿಪಡಿಸಬಹುದು ಎಂದು ಇದೆ ವೇಳೆ ಜಮೀರ್ ಅವರು ತಿಳಿಸಿದರು.
ಕೇಂದ್ರ ನಗರಾಭಿವೃದ್ಧಿ, ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಅಭಿವೃದ್ಧಿ ಸಚಿವರುಗಳನ್ನು ಭೇಟಿ ಮಾಡಿ ರಾಜ್ಯದ ಪ್ರಸ್ತಾವನೆಗಳಿಗೆ ಅನುಮತಿ ದೊರಕಿಸುವ ನಿಟ್ಟಿನಲ್ಲಿ ಆದ್ಯತೆ ಮೇಲೆ ಕ್ರಮ ವಹಿಸುವುದಾಗಿ ಜಯಚಂದ್ರ ಹೇಳಿದರು.