ಹೊಸದಿಲ್ಲಿ: ಜಮ್ಮು ಕಾಶ್ಮೀರವನ್ನು ಇಬ್ಬಾಗ ಮಾಡಿ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶ ಮಾಡಿದ ನಂತರ ಈಗ ಆ ರಾಜ್ಯದ ಹೆಸರನ್ನು ಬದಲಾಯಿಸುವ ಕಾರ್‍ಯಕ್ಕೆ ಮೋದಿ ಸರ್ಕಾರ ಕೈಹಾಕುವುದೇ ಎಂಬ ಚರ್ಚೆ ಶುರುವಾಗಿದೆ.
ಈ ಚರ್ಚೆ ಶುರುವಾಗಲು ಖುದ್ದು ಗೃಹ ಮಂತ್ರಿ ಅಮಿತ್ ಶಾ ನೀಡಿರುವ ಹೇಳಿಕೆಯೇ ಮೂಲ ಕಾರಣವಾಗಿದೆ. ಕಾಶ್ಮೀರ ಹೆಸರು ಬದಲಾವಣೆ ಕುರಿತು ಅಮಿತ್ ಶಾ ನೀಡಿರುವ ಹೇಳಿಕೆ ಇದೀಗ ರಾಷ್ಟ್ರದಾದ್ಯಂತ ಸಂಚಲನ ಸೃಷ್ಟಿಸಿದೆ.
ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ‘ಜೆ-ಕೆ ಮತ್ತು ಲಡಾಖ್ ಥ್ರೂ ದಿ ಏಜಸ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ, “ಕಾಶ್ಮೀರವನ್ನು ಕಶ್ಯಪನ ನಾಡು ಎಂದು ಕರೆಯುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಹೀಗಾಗಿ ಕಾಶ್ಮೀರಕ್ಕೆ ಕಶ್ಯಪ ಋಷಿ ಅವರ ಹೆಸರು ಇಡುವ ಸಾಧ್ಯತೆಯನ್ನು ನಾವು ಪರಿಗಣಿಸಬೇಕು..” ಎಂದು ಹೇಳಿ ಸಂಚಲನ ಸೃಷ್ಟಿಸಿದ್ದಾರೆ.
“ಕಶ್ಯಪ ಋಷಿ ಹಿಂದೂ ಧರ್ಮದ ಪೂಜ್ಯನೀಯ ವ್ಯಕ್ತಿ. ಕಾಶ್ಮೀರಕ್ಕೆ ಕಶ್ಯಪನ ನಾಡು ಎಂದೇ ಕರೆಯಲಾಗುತ್ತದೆ. ಹೀಗಾಗಿ ಕಾಶ್ಮೀರದ ಬದಲಾಗಿ ಕಶ್ಯಪ ಋಷಿಯ ಹೆಸರನ್ನೇ ಕಾಶ್ಮೀರಕ್ಕೆ ಇಡುವುದು ಸೂಕ್ತ ಎಂಬ ಸಲಹೆಯನ್ನು ನಾವು ಪರಿಗಣಿಸಬೇಕು” ಎಂದು ಅಮಿತ್ ಶಾ ಹೇಳಿದ್ದಾರೆ.
“ಸಾಂಸ್ಕೃತಿಕ ಗಡಿಗಳನ್ನು ಹೊಂದಿರುವ ಜಗತ್ತಿನ ಏಕೈಕ ದೇಶ ಭಾರತ. ಭೌಗೋಳಿಕ ರಾಜಕೀಯ ಗಡಿಗಳನ್ನು ಮೀರಿ ಸಾಂಸ್ಕೃತಿಕ ಗಡಿಗಳನ್ನು ಸೃಷ್ಟಿಸಿಕೊಂಡ ಈ ದೇಶದ ಅಸ್ಮಿತೆಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ..” ಎಂದು ಅಮಿತ್ ಶಾ ನುಡಿದರು.
“ಶಂಕರಾಚಾರ್ಯರ, ರೇಷ್ಮೆ ಮಾರ್ಗ ಮತ್ತು ಕಾಶ್ಮೀರದ ಹೇಮಿಶ್ ಮಠಗಳ ಉಲ್ಲೇಖಗಳು, ಈ ಭೂಭಾಗ ಅನಾದಿ ಕಾಲದಿಂದಲೂ ಭಾರತೀಯ ಸಂಸ್ಕೃತಿಯೊಂದಿಗೆ ಸಂಪರ್ಕ ಹೊಂದಿದೆ ಎಂಬುದನ್ನು ತೋರಿಸುತ್ತದೆ.
ಲಡಾಖಲ್ಲಿ ಧ್ವಂಸಗೊಂಡ ದೇವಾಲಯಗಳ ಉಲ್ಲೇಖಗಳು ಮತ್ತು ಕಾಶ್ಮೀರದಲ್ಲಿ ಸಂಸ್ಕೃತದ ಬಳಕೆಯು, ಕಣಿವೆಯು ಭಾರತದೊಂದಿಗೆ ಎಂದಿಗೂ ಮುರಿಯಲಾಗದ ಬಾಂಧವ್ಯ ಹೊಂದಿದೆ ಎಂಬುದನ್ನು ಸಾರಿ ಹೇಳುತ್ತಿವೆ..” ಎಂದು ಅಮಿತ್ ಶಾ ಇದೇ ವೇಳೆ ಹೇಳಿದರು.