ಖಾಸಗಿ ವಿಮಾನವೊಂದರ ಲ್ಯಾಂಡಿಂಗ್ ವೈಫಲ್ಯದಿಂದ ದಕ್ಷಿಣ ಆಫ್ರಿಕಾ ಆಟಗಾರರು ಹಾಗೂ ಐಸಿಸಿ ಅಧಿಕಾರಿಗಳು ವೆಸ್ಟ್ ಇಂಡೀಸ್ ನ ಟ್ರಿನಿಡಾಡ್ ವಿಮಾನ ನಿಲ್ದಾಣದಲ್ಲಿ ಸಿಲುಕಿದ ಘಟನೆ ವರದಿಯಾಗಿದೆ.
ಭಾನುವಾರ ನಡೆಯಬೇಕಿರುವ ಬಾರ್ಬಡಾಸ್ ನಲ್ಲಿ ನಿಗದಿಯಾಗಿರುವ ಭಾರತ ವಿರುದ್ಧದ ಟಿ-20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಹೊರಟ್ಟಿದ್ದ ದಕ್ಷಿಣ ಆಫ್ರಿಕಾ ಆಟಗಾರರು ಬರಬೇಕಿತ್ತು. ಆದರೆ ಟ್ರಿನಿಡಾಡ್ ವಿಮಾನ ನಿಲ್ದಾಣದಲ್ಲಿ ಆದ ಅಪಘಾತದಿಂದ ವಿಮಾನ ನಿಲ್ದಾಣವನ್ನು ಕೆಲವು ಗಂಟೆಗಳ ಕಾಲ ಮುಚ್ಚಲಾಯಿತು.
ಟಿ-20 ವಿಶ್ವಕಪ್ ಆತಿಥ್ಯ ವಹಿಸಿರುವ ವೆಸ್ಟ್ ಇಂಡೀಸ್ ನಲ್ಲಿ ಆಟಗಾರರು ಹಲವಾರು ಸಮಸ್ಯೆಗಳನ್ನು ಪದೇಪದೆ ಎದುರಿಸುತ್ತಿದ್ದಾರೆ. ಅಲ್ಲದೇ ಮಳೆಯ ಕಾಟದಿಂದ ಪಂದ್ಯಗಳು ಕೂಡ ಸರಿಯಾಗಿ ನಡೆಯುತ್ತಿಲ್ಲ. ಮೈದಾನಕ್ಕೆ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರು ಬರುತ್ತಿಲ್ಲ.
ಸಮಸ್ಯೆಗಳ ನಡುವೆಯೂ ವಿಶ್ವಕಪ್ ಟೂರ್ನಿ ಅಂತಿಮ ಹಂತಕ್ಕೆ ಬಂದಿದ್ದು, ಇದೇ ಮೊದಲ ಬಾರಿ ಫೈನಲ್ ಪ್ರವೇಶಿಸಿ ಇತಿಹಾಸ ಬರೆದಿರುವ ದಕ್ಷಿಣ ಆಫ್ರಿಕಾ ಆಟಗಾರರು ವಿಮಾನ ನಿಲ್ದಾಣದಲ್ಲೇ ಸುಮಾರು 6 ಗಂಟೆಗಳ ಕಾಲ ಕಳೆಯಬೇಕಾಯಿತು.
ಸುಮಾರು 6 ಗಂಟೆಗಳ ನಂತರ ವಿಮಾನ ನಿಲ್ದಾಣದ ಸಿಬ್ಬಂದಿ ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದ್ದರಿಂದ ಸಂಜೆ 4.30ರ ಸುಮಾರಿಗೆ ಬಾರ್ಬಾಡಾಸ್ ಗೆ ಆಗಮಿಸಲಿದ್ದಾರೆ. ಇದರಿಂದ ಆಟಗಾರರಿಗೆ ಮಾನಸಿಕ ಒತ್ತಡದ ಜೊತೆಗೆ ಅಗತ್ಯ ತಯಾರಿಗೆ ಸಮಸ್ಯೆ ಆಗಿದೆ ಎಂದು ಆರೋಪ ಕೇಳಿ ಬಂದಿದೆ.
ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 9 ವಿಕೆಟ್ ಗಳಿಂದ ಆಫ್ಘಾನಿಸ್ತಾನ ತಂಡವನ್ನು ಸೋಲಿಸಿ ಮೊದಲ ಬಾರಿ ಸೆಮಿಫೈನಲ್ ಸೋಲಿನ ಸರಪಳಿ ಕಳಚಿಕೊಂಡು 32 ವರ್ಷಗಳ ನಂತರ ವಿಶ್ವಕಪ್ ನಲ್ಲಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿತ್ತು.