ವಾಯುವಾಲಿನ್ಯ ಕುರಿತು ದೇಶಾದ್ಯಂತ ಚರ್ಚೆಗಳು ನಡೆಯುತ್ತಿರುವ ನಡುವೆ ಅತ್ಯಂತ ಶುದ್ದ ಗಾಳಿ ಎಲ್ಲಿ ಸಿಗುತ್ತದೆ ಎಂಬ ಹುಡುಕಾಟಕ್ಕೆ ಕೊನೆಗೂ ಉತ್ತರ ಸಿಕ್ಕಿದೆ.
ಹೌದು, ದೇಶದಲ್ಲೇ ಅತ್ಯಂತ ಶುದ್ಧ ಗಾಳಿ ಸಿಗುವ ಊರುಗಳಲ್ಲಿ ಕರ್ನಾಟಕದ ಮಡಿಕೇರಿ, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಅಗ್ರ 10ರಲ್ಲಿ ಸ್ಥಾನ ಪಡೆದಿವೆ.
ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಿಸಿದ ಶುದ್ಧ ಗಾಳಿ ಸಿಗುವ ಪಟ್ಟಣಗಳ ಪಟ್ಟಿಯಲ್ಲಿ ಮಂಜಿನ ನಗರಿ ಮೊದಲ ಸ್ಥಾನ ಗಿಟ್ಟಿಸಿದೆ.
ಮಾಲಿನ್ಯ ನಿಯಂತ್ರಣ ಮಂಡಳಿ ಕಳೆದ ವರ್ಷ ನಡೆಸಿದ ಸಮೀಕ್ಷೆಯಲ್ಲಿ 5ನೇ ಸ್ಥಾನ ಪಡೆದಿದ್ದ ಮಡಿಕೇರಿ ಇದೀಗ ಅಗ್ರಸ್ಥಾನಕ್ಕೆ ಲಗ್ಗೆ ಹಾಕಿದೆ. ಅಲ್ಲದೇ ಮಡಿಕೇರಿಯಲ್ಲಿ ವರ್ಷದ ಬಹುತೇಕ ದಿನ ಉತ್ತಮ ಗಾಳಿ ಸಿಗುತ್ತದೆ ಎಂದು ಹೇಳಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯು ಗುಣಮಟ್ಟ (AQI) ಸೂಚ್ಯಂಕ ಪ್ರಮಾಣ ಪ್ರಕಾರ ಕೊಡಗಿನಲ್ಲಿ 28, ಚಿಕ್ಕಮಗಳೂರಿನಲ್ಲಿ 30 ಹಾಗೂ ಚಿಕ್ಕಬಳ್ಳಾಪುರದಲ್ಲಿ 28 ಅಂಕ ಪಡೆದಿವೆ. ಅಲ್ಲದೇ ವರ್ಷದ ಬಹುತೇಕ ದಿನ ಗಾಳಿಯ ಗುಣಮಟ್ಟ ಅತ್ಯುತ್ತಮ ಮಟ್ಟದಲ್ಲಿದೆ. ರಾಜಧಾನಿ ದೆಹಲಿ ಎಕ್ಯೂಐ ಸೂಚ್ಯಂಕ 457 ಅಂಕ ದಾಟಿದ್ದು ಗ್ಯಾಸ್ ಚೇಂಬರ್ ಆಗಿ ಜನರ ಜೀವ ಹಿಂಡುತ್ತಿದೆ.