ಭಾರತದ ಸ್ಪಿನ್ ಆಲ್ ರೌಂಡರ್ ಗಳಾದ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಮಾರಕ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ ತಂಡ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನವೇ 235 ರನ್ ಗೆ ಆಲೌಟಾಗಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ ಮೊದಲ ಇನಿಂಗ್ಸ್ ನಲ್ಲಿ 65.4 ಓವರ್ ಗಳಲ್ಲಿ 235 ರನ್ ಗೆ ಪತನಗೊಂಡಿತು.
ನ್ಯೂಜಿಲೆಂಡ್ ಪರ ವಿಲ್ ಯಂಗ್ 138 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 71 ರನ್ ಬಾರಿಸಿದರೆ ಡ್ರೈಲ್ ಮಿಚೆಲ್ 129 ಎಸೆತಗಳಲ್ಲಿ 3 ಬೌಂಡರಿ 3 ಸಿಕ್ಸರ್ ಸೇರಿದ 82 ರನ್ ಗಳಿಸಿ ತಂಡವನ್ನು ಆಧರಿಸಿದರು. ಇವರಿಬ್ಬರು ನಾಲ್ಕನೇ ವಿಕೆಟ್ 85 ರನ್ ಜೊತೆಯಾಟ ನಿಭಾಯಿಸಿದರು.
ಸ್ಪಿನ್ನರ್ ಗಳಾದ ರವೀಂದ್ರ ಜಡೇಜಾ 5 ಮತ್ತು ವಾಷಿಂಗ್ಟನ್ ಸುಂದರ್ 4 ವಿಕೆಟ್ ಪಡೆದು ಕಿವೀಸ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ರವೀಚಂದ್ರನ್ ಅಶ್ವಿನ್ ವಿಕೆಟ್ ಪಡೆಯದೇ ನಿರಾಸೆ ಮೂಡಿಸಿದರು.