ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ರದ್ದು ಮಾಡುತ್ತಿಲ್ಲ. ಆದರೆ ರಾಜ್ಯದಲ್ಲಿ ಕೆಲವರು ಅರ್ಹರಲ್ಲದವರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಅಂತಹವರ ಬಿಪಿಎಲ್ ಕಾರ್ಡ್ ತೆಗೆದು ಹಾಕುತ್ತೇವೆ ಎಂದು ಆಹಾರ ಸಚಿವ ಕೆಎಚ್ ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ ರದ್ದು ಮಾಡುತ್ತೇವೆ ಎಂದು ಬಿಜೆಪಿಯವರು ಸುಮ್ಮನೆ ರಾಜಕೀಯ ಆರೋಪ ಮಾಡುತ್ತಿದ್ದಾರೆ ಎಂದರು.
ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಶೇ 80 ರಷ್ಟು ಬಿಪಿಎಲ್ ಕಾರ್ಡ್ ಗಳು ರಾಜ್ಯದಲ್ಲಿವೆ. ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣದಲ್ಲಿ ಶೇ 50ರ ಮೇಲೆ ಬಿಪಿಎಲ್ ಕಾರ್ಡ್ ಗಳಿಲ್ಲ. ನಮ್ಮ ರಾಜ್ಯದಲ್ಲಿ ಅರ್ಹರಲ್ಲದವರು ಕೂಡಾ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.
ಸಾಕಷ್ಟು ಸ್ಥಿತಿವಂತರಾಗಿದ್ದು, ಅನರ್ಹರು ಕೂಡ ಬಿಪಿಎಲ್ ಹೊಂದಿದ್ದರೆ ಅಂತಹವರನ್ನು ಎಪಿಎಲ್ ಕಾರ್ಡ್ ಗೆ ವರ್ಗಾಯಿಸುತ್ತಿದ್ದೇವೆ ಹೊರತು ರೇಷನ್ ಕಾರ್ಡ್ ರದ್ದು ಮಾಡುತ್ತಿಲ್ಲ ಎಂದು ಅವರ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ 6.5 ಕೋಟಿ ಜನರ ಪೈಕಿ 4.5 ಕೋಟಿ ಬಿಪಿಎಲ್ ಫಲಾನುಭವಿಗಳು ಇದ್ದಾರೆ. ಬಿಪಿಎಲ್ ಅರ್ಹರಲ್ಲದವರನ್ನು ಎಪಿಎಲ್ ಕಾರ್ಡ್ ಗೆ ವರ್ಗಾವಣೆ ಮಾಡುತ್ತೇವೆ. ಎಪಿಎಲ್ ಕಾರ್ಡುದಾರರಿಗೂ ಬೇರೆ ಬೇರೆ ಸೌಲಭ್ಯವಿದೆ ಎಂದು ಸಚಿವ ಮುನಿಯಪ್ಪ ತಿಳಿಸಿದರು.
ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಗೊಂದಲ ಬಗೆಹರಿದ ಕೂಡಲೇ ಹೊಸ ಕಾರ್ಡ್ ಗಳಿಗೆ ಅರ್ಜಿ ಕರೆಯಲಾಗುವುದು ಎಂದು ಅವರು ಹೇಳಿದರು.