ಭಾರತ ವೈವಿಧ್ಯತೆಯ ದೇಶವಾಗಿದ್ದು, ಕೆಲವರು ವಿಷ ಬೀಜ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಸಂವಿಧಾನದ ೭೫ನೇ ವಾರ್ಷಿಕೋತ್ಸವದ ಅಂಗವಾಗಿ ಸಂವಿಧಾನದ ಕುರಿತ ಚರ್ಚೆಯ ಮೇಲೆ ಶುಕ್ರವಾರ ಭಾಷಣ ಮಾಡಿದ ಪ್ರಧಾನಿ ಮೋದಿ, ಸಂವಿಧಾನ ೭೫ನೇ ವಾರ್ಷಿಕೋತ್ಸವ ಆಚರಿಸುವ ಕಾಲ ಬಂದಿದೆ ಎಂದರು.
ಭಾರತ ಪ್ರಜಾಪ್ರಭುತ್ವದ ತಾಯಿ ಇದ್ದಂತೆ. ಆದರೆ ಇಂದಿರಾ ಗಾಂಧಿ ಆಡಳಿತದಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ಇದ್ದಂತೆ ಎಂದರು.
ಕಾಂಗ್ರೆಸ್ ನ ಒಂದು ಕುಟುಂಬ ಸಂವಿಧಾನದ ಮೇಲೆ ಪ್ರಹಾರ ನಡೆಸಿದೆ. ನೆಹರು ಕಾಲದಲ್ಲಿ ಸಂವಿಧಾನ ತಿದ್ದುಪಡಿಗೆ ಪ್ರಯತ್ನಿಸಲಾಗಿತ್ತು. ಆಗಿನ ರಾಷ್ಟ್ರಪತಿ ವಿರೋಧಿಸಿದ್ದರು. ಇದರಿಂದ ಸಂವಿಧಾನ ಜಾರಿ ಮಾಡಿದವರಿಗೆ ಅಪಮಾನ ಮಾಡಲಾಗಿದೆ ಎಂದು ಅವರು ಹೇಳಿದರು.
ನೆಹರೂ ಮತ್ತು ಇಂದಿರಾ ಗಾಂಧಿ ಆಡಳಿತದಲ್ಲಿ ಸಂವಿಧಾನದಲ್ಲಿ ತಿದ್ದುಪಡಿ ಆಗಿದೆ. ಈಗ ಕೆಲವರು ಸಂವಿಧಾನದ ಹೆಸರಿನಲ್ಲಿ ದೇಶವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ನಮ್ಮ ಆಡಳಿತದಲ್ಲಿ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದೇವೆ. ಒಂದು ದೇಶ, ಒಂದು ಚುನಾವಣೆ ಜಾರಿಗೆ ಈಗಾಗಲೇ ಕ್ರಮಗಳನ್ನು ಕೈಗೊಂಡಿದ್ದೇವೆ. ಒಂದು ದೇಶ, ಒಂದು ತೆರಿಗೆಯಾಗಿ ಜಿಎಸ್ ಟಿ ಜಾರಿ ಮಾಡಿದ್ದೇವೆ ಎಂದು ಅವರು ಹೇಳಿದರು.