ದೀಪಾವಳಿ ಹಬ್ಬ ಕೆಎಸ್ಸಾರ್ಟಿಸಿ ಪಾಲಿಗೆ ಬಂಪರ್ ಹೊಡೆದಿದ್ದು, ಸಾಲು ಸಾಲು ಹಬ್ಬಗಳಿಂದ ಸತತ 5 ದಿನಗಳ ರಜೆ ಬಂದಿದ್ದರಿಂದ ದಾಖಲೆ ಮೊತ್ತದ ಆದಾಯ ಗಳಿಸಿದೆ.
ಕಳೆದ ಬುಧವಾರದಿಂದ ಸೋಮವಾರದವರೆಗಿನ ದೀಪಾವಳಿ, ನವೆಂಬರ್ 1ರ ರಾಜ್ಯೋತ್ಸವ ಹಾಗೂ ವೀಕೆಂಡ್ ಹಿನ್ನೆಲೆಯಲ್ಲಿ ಸತತ 5 ದಿನ ರಜೆಗಳು ಬಂದಿದ್ದವು. ಖಾಸಗಿ ಬಸ್ ಗಳು ಹಬ್ಬದ ದಿನದಂದು ದುಪ್ಪಟ್ಟು ಬೆಲೆ ಮಾಡಿ ದರೋಡೆಗೆ ಇಳಿದಿದ್ದರಿಂದ ಪ್ರಯಾಣಿಕರು ಕೆಎಸ್ಸಾರ್ಟಿಸಿ ಬಸ್ ಅನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದರಿಂದ ದಾಖಲೆ ಮೊತ್ತ ಸಂಗ್ರಹಿಸಿದೆ.
ಅಂಕಿ ಅಂಶಗಳ ಪ್ರಕಾರ ದೀಪಾವಳಿಯ ರಜಾ ದಿನಗಳಲ್ಲಿ ಕೆಎಸ್ಸಾರ್ಟಿಸಿಗೆ 18.68 ಕೋಟಿ ರೂ. ಆದಾಯ ಬಂದಿದೆ. ಇದರಿಂದ ಕೆಎಸ್ಸಾರ್ಟಿಸಿಗೆ ಕನಿಷ್ಠ 5 ಕೋಟಿ ರೂ. ಲಾಭವಾಗಿದೆ ಎಂದು ಹೇಳಲಾಗಿದೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ ಆರ್ ಟಿಸಿ ಒಟ್ಟು 2 ಸಾವಿರ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿತ್ತು. ಇದರ ಪೂರ್ಣ ಲಾಭ ಪಡೆದ ಪ್ರಯಾಣಿಕರು ಅವತಾರ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಮೂಲಕ ಪ್ರಯಾಣ ಖಚಿತಪಡಿಸಿದೆ.
ಕೆಎಸ್ ಆರ್ ಟಿಸಿ ಮೂಲಗಳ ಪ್ರಕಾರ ನವೆಂಬರ್ 3 ರಂದು ಒಂದೇ ದಿನ `ಅವತಾರ್’ ವ್ಯವಸ್ಥೆ ಅಡಿಯಲ್ಲಿ 85,462 ಟಿಕೆಟ್ ಬುಕ್ಕಿಂಗ್ ಆಗಿದ್ದು, ಇದು ಕೆಎಸ್ಸಾರ್ಟಿಸಿ ಇತಿಹಾಸದಲ್ಲೇ ಅತೀ ಹೆಚ್ಚು ಬುಕ್ಕಿಂಗ್ ಆದ ಸಾರ್ವಕಾಲಿಕ ದಾಖಲೆಯಾಗಿದೆ.
ರಾಜ್ಯ ಸರ್ಕಾರ ಶಕ್ತಿ ಯೋಜನೆ ಘೋಷಿಸಿದ್ದು, ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶ ದೀಪಾವಳಿಗೂ ನೀಡಲಾಗಿತ್ತು. ಇದರ ಹೊರತಾಗಿಯೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಆಗಿದ್ದೂ ಅಲ್ಲದೇ ದಾಖಲೆ ಮೊತ್ತದ ಆದಾಯ ಬಂದಿರುವುದು ಕೆಎಸ್ಸಾರ್ಟಿಸಿ ಸಂಸ್ಥೆ ಮೇಲೆ ಸಾರ್ವಜನಿಕರು ಇರಿಸಿದ ನಂಬಿಕೆಗೆ ಸಾಕ್ಷಿಯಾಗಿದೆ.