ಅಧಿಕಾರವನ್ನು ಒದ್ದು ಕಿತ್ಕೊಬೇಕು ಎಂದು ಜ್ಯೋತಿಷಿ ನೀಡಿದ ಸಲಹೆಯನ್ನು ಡಿಸಿಎಂ ಡಿಕೆ ಶಿವಕುಮಾರ್ ಸದನದಲ್ಲಿ ಪ್ರಸ್ತಾಪಿಸಿದಾಗ ಸ್ವಾರಸ್ಯಕರ ಚರ್ಚೆ ನಡೆದಿದ್ದು, ಈ ವೇಳೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಆರ್.ಅಶೋಕ ಯಾವಾಗ ಒದ್ದು ಸಿಎಂ ಸ್ಥಾನ ಕಿತ್ಕೊಂತಿರಿ ಎಂದು ಕಾಲೆಳೆದರು.
ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಗುರುವಾರ ದಿವಂಗತ ಎಸ್.ಎಂ. ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಸಂತಾಪ ಸೂಚಕ ವಿಷಯದಲ್ಲಿ ಚರ್ಚೆ ನಡೆಯುವಾಗ ಈ ಸ್ವಾರಸ್ಯಕರ ಘಟನೆ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡಿದೇ ಮೌನವಾಗಿ ಆಲಿಸಿದರು.
ಎಸ್.ಎಂ.ಕೃಷ್ಣ ಸರಕಾರ ರಚನೆಯಾದಾಗ ಯಾರು ಮಂತ್ರಿಗಳಾಗಬೇಕು ಎಂದು ಪಟ್ಟಿ ಸಿದ್ಧಪಡಿಸಿದವನೇ ನಾನು. ಆ ಪಟ್ಟಿ ರಾಜ್ಯಪಾಲರ ಅಂಕಿತ ಪಡೆದುಕೊಂಡಾಗ, ನನ್ನ ಹಾಗೂ ಜಯಚಂದ್ರ ಹೆಸರೇ ಪಟ್ಟಿಯಲ್ಲಿರಲಿಲ್ಲ ಎಂದು ಡಿಸಿಎಂ ಎಸ್.ಕೃಷ್ಣ ಜೊತೆಗಿನ ಒಡನಾಟದ ಕ್ಷಣಗಳನ್ನು ವಿಧಾನಸಭೆಯಲ್ಲಿ ಹೇಳುವಾಗ ಸೂಜಿ ಬಿದ್ದರೂ ಸಪ್ಪಳವಾಗುವಷ್ಟು ಮೌನ.
ಅಧಿಕಾರ ಬೇಡಿದರೆ ದಕ್ಕುವುದಿಲ್ಲ, ಕಿತ್ತುಕೊಳ್ಳಬೇಕು ಎಂದು ಮಹಾನುಭಾವರೊಬ್ಬರು ಹೇಳಿದ್ದರು. ಬೆಳಗ್ಗೆ ಪ್ರಮಾಣವಚನ ಇತ್ತು. ಆ ರಾತ್ರಿ 2 ಗಂಟೆಗೆ ಕೃಷ್ಣ ಮನೆಗೆ ಹೋಗಿ ಬಾಗಿಲಿಗೆ ಒದ್ದು ಮಂತ್ರಿಮಂಡಲದಲ್ಲಿ ಹೆಸರು ತೆಗೆದದ್ದಕ್ಕೆ ಜಗಳ ಮಾಡಿದೆ. ಬೆಳಗ್ಗೆ 6ರತನಕ ರೆಬಲ್ ಆಗಿದ್ದೆ. ಸಾವಧಾನಿಯಾಗಿದ್ದ ಕೃಷ್ಣ ಏಕಿಷ್ಟು ರುದ್ರಾವತಾರ ಎಂದು ಕೇಳಿದರು.
ಸಮಾಧಾನಪಡಿಸಲು ಯತ್ನಿಸಿದರು. ಆಗ ಕೃಷ್ಣಾಜಿಯವರ ಪತ್ನಿ, ಮಗಳು ಹೇಳಿದ್ದೇನೆಂದರೆ, “ಸದ್ಯಕ್ಕೆ ನಿಮ್ಮ ಟೈಮ್ ಚನ್ನಾಗಿಲ್ಲ ಎಂದು ಜ್ಯೋತಿಷಿಗಳು ಹೇಳಿದ್ದಾರೆ.” ಅದಕ್ಕೆ ಮಂತ್ರಿಯಾದರೆ ಇವತ್ತೇ. ಇಲ್ಲವಾದರೆ ಇನ್ನೆಂದೂ ಮಂತ್ರಿಯಾಗಲ್ಲ ಎಂದು ನನಗೂ ಜ್ಯೋತಿಷಿ ಹೇಳಿದ್ದಾರೆ ಎಂದ ಬಳಿಕ ಮಂತ್ರಿಗಳ ಪಟ್ಟಿ ಬದಲಾಯಿತು. ಪ್ರಮಾಣವಚನ ದಿನ ಮುಂದೂಡಿತು ಎಂದು ತಾವು ಮೊದಲ ಸಲ ಮಂತ್ರಿಯಾದ ಘಟನೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಮರಿಸಿದರು.
ತಕ್ಷಣವೇ ಎದ್ದು ನಿಂತ ವಿರೋಧಪಕ್ಷದ ನಾಯಕ ಆರ್.ಅಶೋಕ, ಅಧಿಕಾರವನ್ನು ಒದ್ದು ಕಿತ್ಗೊಬೇಕು ಎಂದು ನೀವೇ ಹೇಳಿದ್ದಿರಿ. ಮುಖ್ಯಮಂತ್ರಿ ಕುರ್ಚಿಯನ್ನು ಯಾವಾಗ ಒದ್ದು ಕಿತ್ಕೋತಿರಿ ಹೇಳಿ. ಜನೇವರಿ ನಂತರ ನಿಮ್ಮ ಗ್ರಹಗತಿ ಚನ್ನಾಗಿಲ್ಲ ಅಂತ ಜ್ಯೋತಿಷಿ ಹೇಳಿದ್ದಾರೆ ಎಂದು ಕಾಲೆಳೆದರು.
ಇದಕ್ಕೆ ದನಿಗೂಡಿಸಿದ ನರಗುಂದ ಶಾಸಕ ಸಿ.ಸಿ.ಪಾಟೀಲ, ಡಿಕೆಶಿಯವರೇ, ಜನೇವರಿಯೊಳಗೆ ಸಿಎಂ ಆಗಿಬಿಡಿ. ನಿಮ್ಮ ನೇತೃತ್ವದಲ್ಲೇ ನಮ್ಮ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗಲಿ ಎಂದು ಛೇಡಿಸಿದರು.
ಡಿಕೆಶಿ ಬೆಂಬಲಕ್ಕೆ ಬಂದ ಸಚಿವ ಪ್ರಿಯಾಂಕ ಖರ್ಗೆ, ನಮ್ಮ ಪಾರ್ಟಿ ಕಥೆ ಬಿಡಿ, ನಿಮ್ಮದು ಬಿಜೆಪಿಯೋ? ವೈಜೆಪಿಯೋ? ನಿಜವಾದ ಬಿಜೆಪಿ ಯಾವುದು? ಎಂದು ತಿಳಿದುಕೊಳ್ಳಿ ಎಂದರು.
ನಾವು ವಿರೋಧ ಪಕ್ಷದಲ್ಲಿದ್ದೇವೆ, ನೀವು ಆಡಳಿತ ಪಕ್ಷದಲ್ಲಿದ್ದಿರಿ ಎಂಬುದು ನೆನಪಿರಲಿ. ಡಿಕೆಶಿ ಸಾಹೇಬ್ರೇ. ಇಬ್ಬರ ಜಗಳ ಮೂರನೇಯವರಿಗೆ ಲಾಭ ಆಗಬಾರದು ಎಂದರೆ ಪ್ರಿಯಾಂಕ ಖರ್ಗೆ ಅವರಿಂದ ಅಂತ ಕಾಯ್ದುಕೊಳ್ಳಿ. ಇಲ್ಲದಿದ್ದರೆ ನಿಮ್ಮ-ಸಿದ್ಧರಾಮಯ್ಯ ನಡುವೆ ಮಲ್ಲಿಕಾರ್ಜುನ ಖರ್ಗೆ ಬಂದು ಸಿಎಂ ಆಗಿಬಿಡಬಹುದು. ಪ್ರಿಯಾಂಕ ಖರ್ಗೆ ನಿಮ್ಮನ್ನು ಗೋವಿಂದ ಮಾಡಬಹುದು, ಹುಷಾರ್ ಎಂದು ಪ್ರತಿಪಕ್ಷದ ಸದಸ್ಯರು ಮಾತಿನ ಚಟಾಕಿ ಹಾರಿಸಿದರು.
ಅಲ್ಲಿಯವರೆಗೆ ಎಲ್ಲವನ್ನು ಕೇಳಿಸಿಕೊಂಡ ಡಿಕೆಶಿ, ಜ್ಯೋತಿಷಿ ಹೇಳಿದ್ದನ್ನು ನಾನು ಈಗ ಕೇಳಿದರೆ ಬಿಜೆಪಿಯ 25 ರಿಂದ 30 ಸದಸ್ಯರು, ದಳದ ಒಂದಿಬ್ಬರು ಆಡಳಿತ ಪಕ್ಷದ ಸಾಲಿಗೆ ಬರಬಹುದು ಎಂದಾಗ, ಮಧ್ಯೆ ಪ್ರವೇಶಿಸಿದ ಅಶೋಕ್, ಹೌದು ನಿಮ್ಮ ಜ್ಯೋತಿಷ್ಯ ಸರಿಯಾಗಿರಬಹುದು. ನಮ್ಮ 20-25 ಶಾಸಕರು ಜೊತೆ ಸೇರಿಸಿದರೆ ನೀವು ಬಿಜೆಪಿಯ ನಾಯಕರಾಗಬಹುದು. ಆಗ ನೀವು ಹೇಳಿದಂತೆ ಕೇಳುತ್ತೇವೆ ಎಂದು ಕಿಚಾಯಿಸಿದರು. ಸುಮ್ಮನಾಗದ ಡಿಕೆಶಿ, ಏನಯ್ಯಾ ಸುನೀಲ್, ನಾನು ಬಿಜೆಪಿಗೆ ಬರ್ತಿನೇನಯ್ಯಾ? ಎಂದಾಗ ಶಾಸಕ ಸುನೀಲ್ ಪೇಚಿಗೆ ಸಿಲುಕಿದರು.