ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಅಂತಾರೆ. ಆದರೆ ಇಬ್ಬರ ನಡುವೆ ಜಗಳ ಯಾಕೆ ಆರಂಭವಾಯಿತು ಅನ್ನೋದು ಮಾತ್ರ ಯಾರಿಗೂ ಗೊತ್ತಾಗುವುದೇ ಇಲ್ಲ!
ಕ್ಷುಲಕ ಕಾರಣಕ್ಕೆ ಮದುವೆ ಆದ ಮೂರೇ ನಿಮಿಷದಲ್ಲಿ ದಂಪತಿ ವಿಚ್ಛೇದನ ಪಡೆದ ವಿಚಿತ್ರ ಘಟನೆ ದುಬೈನಲ್ಲಿ ನಡೆದಿದೆ. ಇದು ದುಬೈ ಇತಿಹಾಸದಲ್ಲೇ ಅತ್ಯಂತ ಅಲ್ಪಾವಧಿಯ ಮದುವೆ ಆಗಿ ದಾಖಲೆ ಪುಟ ಸೇರಿದೆ.
ಮದುವೆ ಆದ 3 ನಿಮಿಷದಲ್ಲೇ ದಂಪತಿ ಬೇರ್ಪಟ್ಟಿದ್ದು, ಸಮಾರಂಭದ ಔಪಚಾರಿಕತೆ ಮುಗಿಸಿ ಕೋರ್ಟ್ ಮೆಟ್ಟಿಲೇರಿ ವಿಚ್ಛೇದನ ಪಡೆದಿದ್ದಾರೆ. ಆದರೆ ಈ ಘಟನೆ ನಡೆದಿದ್ದು 2019ರಲ್ಲಿ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನ್ಯಾಯಾಧೀಶರ ಮುಂದೆ ಮದುವೆ ನೋಂದಣಿ ನಡೆದಿತ್ತು. ಈ ವೇಳೆ ಆಕಸ್ಮಿಕವಾಗಿ ಕೆಳಗೆ ಬಿದ್ದ ಪತ್ನಿ ನೋಡಿ ಪತಿರಾಯ `ಸ್ಟುಪಿಡ್’ ಎಂದು ಬೈಯ್ದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಯುವತಿ ಕೂಡಲೇ ಮದುವೆ ರದ್ದು ಮಾಡುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದ್ದಾರೆ. ಅಷ್ಟೇ ವೇಗವಾಗಿ ಪ್ರತಿಕ್ರಿಯಿಸಿದ ನ್ಯಾಯಾಧೀಶ ಮದುವೆ ರದ್ದು ಮಾಡಿದ್ದಾಗಿ ಘೋ಼ಷಿಸಿದ್ದಾರೆ.
ಹಳೆಯ ಘಟನೆಯನ್ನು ನೆನೆದು ಪತಿ ಈ ವಿಷಯವನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಎಡವಟ್ಟುಗಳು ಆದಾಗ ಮನೆಯನ್ನು ತಂದೆ ಹಾಗೂ ಇತರರನ್ನು ರೇಗಿಸುತ್ತಿದ್ದೆ. ಆಕೆ ಬಿದ್ದಾಗ ಕೂಡಲೇ ತಮಾಷೆಗೆ ರೇಗಿಸಿದೆ. ಅದೇ ದೊಡ್ಡ ವಿಷಯವಾಯಿತು. ತಮಾಷೆಯನ್ನು ಸ್ವೀಕರಿಸುವ ಮನಸ್ಥಿತಿಯಲ್ಲಿ ಕೆಲವರು ಇರುವುದಿಲ್ಲ ಎಂಬುದು ಆ ಘಟನೆಯಿಂದ ತಿಳಿಯಿತು ಎಂದು ಹೇಳಿಕೊಂಡಿದ್ದಾನೆ.
ಇದಕ್ಕೂ ಮುನ್ನ ಇಂಗ್ಲೆಂಡ್ ನಲ್ಲಿ ದಂಪತಿ 90 ನಿಮಿಷಕ್ಕೆ ವಿಚ್ಛೇದನ ಪಡೆದಿದ್ದರು. ಸ್ಕಾಟ್ ಮೈಕಿ ಮತ್ತು ವಿಕ್ಟೋರಿಯಾ ಆಂಡರ್ಸನ್ ಗ್ರೇಟ್ ಮ್ಯಾಂಚೆಸ್ಟರ್ ನಲ್ಲಿ ಮದುವೆ ಆದ 90 ನಿಮಿಷಕ್ಕೆ ದಾಂಪತ್ಯ ಮುರಿದುಕೊಂಡಿದ್ದರು.
ಮದುವೆ ಅರತಕ್ಷತೆಯಲ್ಲಿ ಗಂಡ ತಮ್ಮನ ಮೇಲೆ ರೇಗಾಡಿದರು ಎಂದು ಪತ್ನಿ ಪೊಲೀಸರಿಗೆ ದೂರು ನೀಡಿದರು. ಆದರೆ ಸ್ಥಳಕ್ಕೆ ಬಂದ ಪೊಲೀಸರ ಮೇಲೂ ಗಂಡ ಹಲ್ಲೆ ಮಾಡಿದ್ದ.