ಆತ್ಮಹತ್ಯೆ ಮಾಡಿಕೊಂಡ ರೈತರ ಸಾವಿಗೆ ವಕ್ಫ್ ಮಂಡಳಿ ಜಮೀನು ವಶಪಡಿಸಿಕೊಂಡಿದ್ದೇ ಕಾರಣ ಎಂದು ಸುಳ್ಳು ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಾವೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ರುದ್ರಪ್ಪ ಚನ್ನಪ್ಪ ಬಾಳಿಕಾಯಿ ತಮ್ಮ ಜಮೀನನ್ನು ವಕ್ಫ್ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ತಿಳಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದರು.
ರೈತನ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಬಿ.ಜೆ.ಜಮೀರ್ ಅಹಮದ್ ಖಾನ್ ಕಾರಣ ಎಂದು ಆರೋಪಿಸಿದ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿ ಪೊಲೀಸರು ಸುಳ್ಳು ಆರೋಪ ಮಾಡಿ ಜನರ ದಿಕ್ಕು ತಪ್ಪಿಸುವ ಮೂಲಕ ಪ್ರಚೋದನೆ ಮಾಡಿದ್ದಕ್ಕಾಗಿ ಗುರುವಾರ ಎಫ್ ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಸ್ಪಷ್ಟನೆ ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ರುದ್ರಪ್ಪ ಚನ್ನಪ್ಪ ಬಾಳಿಕಾಯಿ 6-1-2022ರಂದು ಬೆಳೆ ನಷ್ಟ ಹಾಗೂ ಸಾಲದ ಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಸೆಕ್ಷನ್ 174ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಅಧಿಕೃತವಾಗಿ ಅಂತಿಮ ವರದಿ ಕೂಡ ಸಲ್ಲಿಸಲಾಗಿದೆ. ಆದರೆ ತೇಜಸ್ವಿ ಸೂರ್ಯ ರೈತ ಮೃತಪಟ್ಟಿದ್ದು ಬೆಳೆ ನಷ್ಟ ಅಥವಾ ಸಾಲದಿಂದ ಅಲ್ಲ, ವಕ್ಫ್ ಮಂಡಳಿ ಆತನ ಜಮೀನನ್ನು ವಶಪಡಿಸಿಕೊಂಡಿದ್ದರಿಂದ ಎಂದು ಆರೋಪಿಸಿದ್ದರು.
ಪೊಲೀಸರು ನೋಟಿಸ್ ನೀಡಿದ ಬೆನ್ನಲ್ಲೇ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಸ್ಪಷ್ಟನೆ ನೀಡಿರುವ ತೇಜಸ್ವಿ ಸೂರ್ಯ, ಈ ವಿಷಯ ನನ್ನ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದಗಳು. ರಾಜ್ಯದಲ್ಲಿ ಸಾವಿರಾರು ರೈತರ ಜಮೀನು ವಕ್ಫ್ ಮಂಡಳಿ ಪಾಲಾಗುತ್ತಿರುವ ಸುದ್ದಿಯಲ್ಲಿ ಈ ಸುದ್ದಿಯೂ ಬಂದಿದ್ದರಿಂದ ತಪ್ಪು ಗ್ರಹಿಸಲಾಗಿದೆ ಎಂದು ಹೇಳಿದ್ದಾರೆ.