Wednesday, July 3, 2024
Google search engine
Homeತಾಜಾ ಸುದ್ದಿಮುಂಗಾರು ಮಳೆ ಅಬ್ಬರ; ತ್ರಿವೇಣಿ ಸಂಗಮ ಜಲಾವೃತ, ಕೆಆರ್ ಎಸ್ ಒಳಹರಿವು ಹೆಚ್ಚಳ

ಮುಂಗಾರು ಮಳೆ ಅಬ್ಬರ; ತ್ರಿವೇಣಿ ಸಂಗಮ ಜಲಾವೃತ, ಕೆಆರ್ ಎಸ್ ಒಳಹರಿವು ಹೆಚ್ಚಳ

ಕೇರಳ ಹಾಗೂ ಮಲೆನಾಡು ಸೇರಿದಂತೆ ಕಾವೇರಿ ಜಲನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಕೊಡಗಿನ ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತಗೊಂಡಿದ್ದು, ಕೆಆರ್ ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ ಒಳಹರಿವು ಪ್ರಮಾಣ ಹೆಚ್ಚಾಗಿದೆ.

ಕೊಡಗು ಹಾಗೂ ಕೇರಳದ ವಯನಾಡು ಪ್ರದೇಶದಲ್ಲಿ ಮುಂಗಾರು ಮಳೆ ಜೋರಾಗಿದೆ. ಇದರಿಂದಾಗಿ ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗಿದೆ. ಇದರಿಂದ ಈ ಭಾಗದಲ್ಲಿ ಕೃಷಿ ಚಟುವಟಿಕೆಗಳು ಗದಗೆದರಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.

ಕೇರಳದ ವಯನಾಡಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಮೈಸೂರು ಜಿಲ್ಲೆಯ ಹೆಚ್. ಡಿ ಕೋಟೆಯ ಬಳಿಯ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಹೆಚ್ಚು ಒಳ ಹರಿವು ಬರುತ್ತಿದ್ದು, ಕಬಿನಿ ಜಲಾಶಯದ ನೀರಿನ ಸಾಮರ್ಥ್ಯ 84 ಅಡಿ ಇದೆ. ಇಂದಿನ ನೀರಿನ ಸಾಮರ್ಥ್ಯ 69 ಅಡಿಗಳಾಗಿದ್ದು, ಒಳ ಹರಿವು 16,977 ಕ್ಯೂಸೆಕ್‌ ಆಗಿದೆ.

ಕೊಡಗಿನಲ್ಲಿ ಕಳೆದ 2 ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮುಂಗಾರು ಮಳೆಗೆ ಕಾವೇರಿ ಉಗಮ ಸ್ಥಾನ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತವಾಗಿದ್ದು, ಮಡಿಕೇರಿ ಸುತ್ತ ಮುತ್ತ ಇಂದು ಸಹ ಧಾರಾಕಾರ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಸಣ್ಣ-ಪುಟ್ಟ ಅನಾಹುತಗಳು ಸಂಭವಿಸಿವೆ.

ಕೊಡಗಿನಲ್ಲಿ ಧಾರಾಕಾರ ಮಳೆಯಿಂದ ಕಾವೇರಿ ನದಿಗೆ ಹೆಚ್ಚಿನ ನೀರು ಬರುತ್ತಿದ್ದು, ಕೆಆರ್​ಎಸ್‌ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. ಕೆಆರ್​ಎಸ್​ನ ಜಲಾಶಯದ ಗರಿಷ್ಠ ನೀರಿನ ಮಟ್ಟ 124 ಅಡಿಯಾಗಿದ್ದು, ಇಂದಿನ ನೀರಿನ ಮಟ್ಟ 85 ಅಡಿಯಾಗಿದೆ. ಒಳ ಹರಿವು 3856 ಕ್ಯೂಸೆಕ್‌ ಇದೆ. ಒಳ ಹರಿವು ಇಂದು ಹೆಚ್ಚಾಗುವ ಸಾಧ್ಯತೆ ಇದೆ.

ಕೊಡಗು – ಮೈಸೂರು ಜಿಲ್ಲೆ ಹಾಗೂ ಕಬಿನಿ ಹಿನ್ನೀರಿನ ಕೇರಳದ ವಯನಾಡು ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕಬಿನಿ ಮತ್ತು ಕಾವೇರಿ ಜಲಾಶಯಗಳಿಗೆ ಹೆಚ್ಚುವರಿ ನೀರು ಬರುತ್ತಿದ್ದು, ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments