ನವದೆಹಲಿ: ಬ್ಯಾಂಕು ಹಾಗೂ ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರ ದೂರುಗಳನ್ನು ಕ್ಷಿಪ್ರವಾಗಿ ಇತ್ಯರ್ಥಪಡಿಸಲು ವಿಫಲವಾದರೆ ದಿನದ ಆಧಾರದಲ್ಲಿ ದಂಡ ಪಾವತಿಸಬೇಕಾಗುತ್ತದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.
ಒಂದು ತಿಂಗಳೊಳಗೆ ಗ್ರಾಹಕರ ದೂರುಗಳ ವಿಲೇವಾರಿ ಆಗಬೇಕು. ಒಂದು ವೇಳೆ ಆ ಅವಧಿಯೊಳಗೆ ಸಮಸ್ಯೆ ಇತ್ಯರ್ಥವಾಗದೇ ಹೋದಲ್ಲಿ ದಿನಕ್ಕೆ 100 ರೂ.ನಂತೆ ದಂಡ ವಿಧಿಸಲಾಗುವುದು ಎಂದು ಬ್ಯಾಂಕುಗಳಿಗೆ ಆರ್‌ಬಿಐ ಸೂಚನೆ ನೀಡಿದೆ.
ಈ ಮಧ್ಯೆ ಬ್ಯಾಂಕುಗಳು ಮಾತ್ರವಲ್ಲದೇ ಕ್ರೆಡಿಟ್ ಇನ್ಫಾರ್ಮೇಶನ್ (ಸಾಲ ಮಾಹಿತಿ) ಕಂಪನಿಗಳಿಗೂ ಈ ನಿಯಮ ಅನ್ವಯ ಆಗುತ್ತದೆ. ಈ ದಂಡದ ಹಣವನ್ನು ಗ್ರಾಹಕರಿಗೆ ಪರಿಹಾರವಾಗಿ ನೀಡಲಾಗುತ್ತದೆ. ಗ್ರಾಹಕರ ಸಮಸ್ಯೆಗಳಿಗೆ ಬ್ಯಾಂಕುಗಳು ಬೇಗ ಸ್ಪಂದಿಸಬೇಕು ಎನ್ನುವ ಉದ್ದೇಶದಿಂದ ಆರ್‌ಬಿಐ ಈ ಕ್ರಮ ಕೈಗೊಂಡಿದೆ.
ಇದೂ ಅಲ್ಲದೇ ಇನ್ನೂ ಕೆಲ ಮಹತ್ವದ ಕ್ರಮಗಳನ್ನು ಆರ್‌ಬಿಐ ತೆಗೆದುಕೊಂಡಿದೆ. ಸಿಬಿಲ್, ಎಕ್ಸ್ಪೀರಿಯನ್ ಇತ್ಯಾದಿ ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿಗಳು (ಸಿಐಸಿ) ಯಾವುದೇ ಬ್ಯಾಂಕು ಅಥವಾ ಹಣಕಾಸು ಸಂಸ್ಥೆ ತಮ್ಮ ಗ್ರಾಹಕರ ಕ್ರೆಡಿಟ್ ಮಾಹಿತಿಯನ್ನು ಪಡೆದುಕೊಂಡಲ್ಲಿ, ಆ ಬಗ್ಗೆ ಗ್ರಾಹಕರಿಗೆ ಇಮೇಲ್ ಅಥವಾ ಎಸ್ಸೆಮ್ಮೆಸ್ ಮುಖಾಂತರ ಮಾಹಿತಿ ತಿಳಿಸಬೇಕು ಎಂದು ಆರ್‌ಬಿಐ ಅಪ್ಪಣೆ ಮಾಡಿದೆ.
ಬ್ಯಾಂಕುಗಳು ತಮ್ಮ ಗ್ರಾಹಕರು ಒಂದು ವೇಳೆ ಸಾಲ ಮರುಪಾವತಿಸದೇ ಡೀಫಾಲ್ಟ್ ಆಗುತ್ತಿದ್ದರೆ ಆ ಮಾಹಿತಿಯನ್ನು ಗ್ರಾಹಕರಿಗೆ ತಿಳಿಸಬೇಕು. ಇದನ್ನು 21 ದಿನದೊಳಗೆ ತಿಳಿಸದೇ ಹೋದಲ್ಲಿ ದಿನಕ್ಕೆ 100 ರೂನಂತೆ ಗ್ರಾಹಕರಿಗೆ ಪರಿಹಾರ ಒದಗಿಸಬೇಕಾಗುತ್ತದೆ.
ಸಿಐಸಿ ಅಥವಾ ಗ್ರಾಹಕರು ದೂರು ನೀಡಿದ 21 ದಿನದೊಳಗೆ ಹಣಕಾಸು ಸಂಸ್ಥೆಗಳು ಸಾಲದ ಇತ್ತೀಚಿನ ಮಾಹಿತಿಯನ್ನು ಸಿಐಸಿಗೆ ನೀಡಬೇಕು ಎನ್ನುವ ನಿಯಮ ಇದೆ. ಅದನ್ನು ಪಾಲಿಸದಿದ್ದರೆ ದಂಡ ವಿಧಿಸುವ ಅವಕಾಶ ಇರುತ್ತದೆ.
ಭಾರತದಲ್ಲಿ ಸದ್ಯ ನಾಲ್ಕು ಸಿಐಸಿಗಳು ಕಾರ್ಯನಿರ್ವಹಿಸುತ್ತಿವೆ. ಸಿಬಿಲ್, ಸಿಆರ್‌ಐಎಫ್, ಈಕ್ವಿಫ್ಯಾಕ್ಸ್ ಮತ್ತು ಎಕ್ಸ್ಪೀರಿಯನ್ ಸಂಸ್ಥೆಗಳಿವೆ. ಈ ಸಿಐಸಿಗಳು ಮತ್ತು ಬ್ಯಾಂಕುಗಳು ತಮ್ಮ ಗ್ರಾಹಕರು ನೀಡುವ ದೂರನ್ನು 30 ದಿನದೊಳಗೆ ಇತ್ಯರ್ಥಪಡಿಸಬೇಕು. ದೂರಿನ ಸಂಬಂಧ ಏನೇನು ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುವ ಮಾಹಿತಿಯನ್ನು ಗ್ರಾಹಕರಿಗೆ ಅಪ್ಡೇಟ್ ಮಾಡಬೇಕು.
ಒಂದು ವೇಳೆ ದೂರನ್ನು ತಿರಸ್ಕರಿಸಿದಲ್ಲಿ ಕಾರಣವನ್ನು ತಿಳಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಕಟ್ಟುನಿಟಿನ ಸೂಚನೆ ನೀಡಿದೆ.