ದೇವಸ್ಥಾನ ಹಾಗೂ ರೈತರ ಜಮೀನುಗಳನ್ನು ವಕ್ಫ್ ಗೆ ಸೇರ್ಪಡೆ ಮಾಡುವುದಿಲ್ಲ. ಒಂದು ವೇಳೆ ವಕ್ಫ್ ಆಸ್ತಿ ಸಂಬಂಧವಾಗಿ ನೋಟಿಸ್ ನೀಡಿದ್ದರೆ, ಆ ನೋಟಿಸ್ ಹಿಂಪಡೆಯುವುದಾಗಿ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಡ್.ಜಮೀರ್ ಅಹಮದ್ ಖಾನ್ ಸ್ಪಷ್ಟ ಪಡಿಸಿದರು.
ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಬುಧವಾರ ವಿರೋಧ ಪಕ್ಷದ ನಾಯಕರು ನಿಯಮ 69 ಅಡಿ, ರೈತರ ಜಮೀನು, ಮಠ-ಮಂದಿರ ಜಾಗ, ಸಾರ್ವಜನಿಕರ ಆಸ್ತಿ, ಸರ್ಕಾರಿ ಕಟ್ಟಡಗಳ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಿರುವ ಕುರಿತು ಪ್ರಸ್ತಾಪಿಸಿದ್ದ ವಿಚಾರಗಳಿಗೆ ಗುರುವಾರ ವಿಧಾನಸಭೆಯಲ್ಲಿ ಅವರು ಉತ್ತರ ನೀಡಿದರು.
ಒಂದು ವೇಳೆ ವಕ್ಫ್ ಜಾಗದಲ್ಲಿಯೇ ದೇವಸ್ಥಾನ ನಿರ್ಮಿಸಿದ್ದರೂ ಕೂಡ, ಸರ್ಕಾರ ಅದನ್ನು ಮುಟ್ಟುವುದಿಲ್ಲ. ಬದಲಿಗೆ ದೇವಸ್ಥಾನಕ್ಕೆ ಮರಳಿ ಆ ಜಾಗವನ್ನು ನೀಡಲಾಗುವುದು. ರೈತರು ಉಳುಮೆ ಮಾಡುತ್ತಿರುವ ಜಮೀನುಗಳನ್ನು ಸಹ ವಕ್ಫ್ ಸೇರ್ಪಡೆ ಮಾಡುವುದಿಲ್ಲ. ವಕ್ಫ್ ತಿದ್ದುಪಡಿ ಕಾಯ್ದೆ ಹಾಗೂ ಸರ್ವೋಚ್ಛ ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಕಳೆದ ಜೂನ್ ತಿಂಗಳ 25 ತಾರೀಖಿನಂದು ವಿಜಯಪುರ ಜಿಲ್ಲೆಯಲ್ಲ್ಲಿ ವಕ್ಫ್ ಅದಾಲತ್ ಹಮ್ಮಿಕೊಳ್ಳಲಾಗಿತ್ತು. ಇದರ ಆಧಾರದ ಮೇಲೆ ಕಂದಾಯ ಅಧಿಕಾರಿಗಳು ವಕ್ಫ್ ಆಸ್ತಿ ಅತಿಕ್ರಮಣಕ್ಕೆ ನೋಟಿಸು ನೀಡಿದ್ದಾರೆ. ಇದನ್ನು ತಪ್ಪಾಗಿ ಅರ್ಥೈಸಿ ರಾಜ್ಯದ್ಯಂತ ಗೊಂದಲ ಮೂಡಿಸಲಾಗಿದೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ಸಮುದಾಯದ ಸೇವೆಗಾಗಿ ಮುಸ್ಲಿಂ ದಾನಿಗಳು ನೀಡಿದ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ರಾಜ್ಯದಲ್ಲಿ ಒಟ್ಟಾರೆ 1.28 ಲಕ್ಷ ಎಕರೆ ವಕ್ಫ್ ಆಸ್ತಿ ಇರುವುದಾಗಿ ದಾಖಲೆಗಳಲ್ಲಿದೆ. ಈ ಜಮೀನಿನಲ್ಲಿ 47,263 ಎಕರೆ ಇನಾಂ ರದ್ದತಿ ಹಾಗೂ 23,623 ಎಕರೆ ಭೂ ಸುಧಾರಣೆ ಕಾಯ್ದೆ ಅನುಸಾರ ಉಳುವವರಿಗೆ ಮಂಜೂರು ಮಾಡಲಾಗಿದೆ. ಸುಮಾರು 3000 ಎಕರೆ ವಕ್ಫ್ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಸರ್ಕಾರಕವೇ ವಶಪಡಿಸಿಕೊಂಡಿದೆ. ಸುಮಾರು 17,969 ಎಕರೆ ವಕ್ಫ್ ಜಮೀನನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿದ್ದಾರೆ. ಇದರಲ್ಲಿ ಶೇ.95 ರಷ್ಟು ಜನರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಉಳಿದ ಶೇ.5 ರಷ್ಟು ಜಮೀನನ್ನು ಅನ್ಯ ಕೋಮಿನವರ ಸುಪರ್ಧಿಯಲ್ಲಿದೆ ಎಂದರು.
ವಕ್ಫ್ ಕಾಯ್ದೆಯು ಸ್ವಾತಂತ್ರ್ಯ ಬರುವ ಮುಂಚೆ ಅಂದರೆ 1830ರಲ್ಲಿ ರಚನೆಯಾಗಿದೆ. ಬ್ರಿಟೀಷ್‌ರು 1923ರಲ್ಲಿ ವಕ್ಫ್ ಕಾಯ್ದೆಯನ್ನು ಜಾರಿಗೊಳಿಸಿದರು. ಸ್ವಾತಂತ್ರ್ಯ ನಂತರ 1954ರಲ್ಲಿ ವಕ್ಫ್ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದು ಜಾರಿಗೊಳಿಸಿದೆ. 1988 ಹಾಗೂ 2017 ರಲ್ಲಿ ಸರ್ವೋಚ್ಛ ನ್ಯಾಯಾಲಯ ವಕ್ಫ್ ಕುರಿತು ಆದೇಶ ನೀಡಿ, ಒತ್ತುವರಿ ತೆರವುಗೊಳಿಸುವಂತೆ ತಿಳಿಸಿದೆ. ಈ ಕುರಿತು ಕಾನೂನು ಇಲಾಖೆ ಅಭಿಪ್ರಾಯ ಪಡೆದು ಹಿಂದಿನ ಸರ್ಕಾರಗಳು ಕ್ರಮ ಕೈಗೊಂಡಿವೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ ಸಹ ವಕ್ಫ್ ಆಸ್ತಿಗಳ ರಕ್ಷಣೆಗೆ 325 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ 6 ಕೋಟಿಯನ್ನು ಕರ್ನಾಟಕಕ್ಕೆ ನೀಡಿದೆ. ಇದನ್ನು ಬಳಸಿ ಹಿಂದಿನ ಸರ್ಕಾರ ವಕ್ಫ್ ಜಮೀನುಗಳ ಜಿಪಿಎಸ್ ಮ್ಯಾಪಿಂಗ್ ಹಾಗೂ ಫ್ಲಾಗಿಂಗ್ ಕಾರ್ಯಕ್ಕೆ ಚಾಲನೆ ನೀಡಿತ್ತು. ಈ ವಿಚಾರದಲ್ಲಿ ವಿನಾಕಾರಣ ರಾಜಕೀಯ ಸಲ್ಲದು. ಕಾಯ್ದೆ ಅನುಸಾರ ರಾಜ್ಯದಲ್ಲಿ ಅಧಿಕಾರ ನಡೆಸಿದ ಎಲ್ಲಾ ಸರ್ಕಾರಗಳು ನೋಟಿಸು ನೀಡುವ ಕೆಲಸ ಮಾಡಿವೆ ಎಂದು ಅವರು ವಿವರಿಸಿದರು.
ಮೈಸೂರು ಮುನೇಶ್ವರ ನಗರದಲ್ಲಿ ವಕ್ಫ್ ಜಾಗದಲ್ಲಿ ವಾಸವಾಗಿರುವ ಕುಟುಂಬಗಳನ್ನು ಒಕ್ಕಲು ಎಬ್ಬಿಸುವುದಿಲ್ಲ. ದಿವಾನ್ ವಿಶ್ವೇಶ್ವರಯ್ಯನವರು ಓದಿದ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಶಾಲೆಯ ವಿವಾದನ್ನು ಸರ್ಕಾರ ಪರಿಹರಿಸಿದೆ. ಶಾಲೆಗೆ ಜಮೀನು ಮಂಜೂರು ಮಾಡಿ ಪಹಣಿಯನ್ನು ನೀಡಲಾಗಿದೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು