ಜೀವಂತವಾಗಿ ಕೋಳಿ ನುಂಗಿದ್ದ 35 ವರ್ಷದ ವ್ಯಕ್ತಿಯೊಬ್ಬ ಉಸಿರುಗಟ್ಟಿ ಮೃತಪಟ್ಟ ಘಟನೆ ಛತ್ತೀಸಘಡದಲ್ಲಿ ಸಂಭವಿಸಿದ್ದು, ವಿಚಿತ್ರ ಅಂದರೆ ಹೊಟ್ಟೆ ಸೇರಿದ್ದ ಕೋಳಿ ಜೀವಂತವಾಗಿ ಪತ್ತೆಯಾಗಿದೆ.
ಅಂಬಿಕಾಪುರದ ಚಿಂಡ್ ಕೋಲೊ ಗ್ರಾಮದ ನಿವಾಸಿ ಆನಂದ್ ಯಾದವ್ ಮೃತಪಟ್ಟಿದ್ದಾರೆ.
ಸ್ನಾನ ಮಾಡಿ ಮರಳುತ್ತಿದ್ದಾಗ ಆನಂದ್ ಯಾದವ್ ಕುಸಿದುಬಿದ್ದಿದ್ದಾರೆ ಎಂದು ಕುಟುಂಬದವರು ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ತಲುಪುವ ಮುನ್ನವೇ ಮೃತಪಟ್ಟಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಉಸಿರುಗಟ್ಟಿ ಮೃತಪಟ್ಟಿದ್ದು ಪತ್ತೆ ಹಚ್ಚಿದರು. ನಂತರ ಹೊಟ್ಟೆಯಲ್ಲಿ ಕೋಳಿ ಕಂಡು ಬಂದಿದ್ದು, ವಿಚಿತ್ರ ಅಂದರೆ ಆ ಕೋಳಿ ಜೀವಂತವಾಗಿತ್ತು.
20 ಸೆಂಟಿಮೀಟರ್ ಅಳತೆಯ ಕೋಳಿ ಇದಾಗಿದ್ದು, ವ್ಯಕ್ತಿಯ ಶ್ವಾಸಕೋಶದ ಬಳಿ ಸಿಲುಕಿಕೊಂಡಿತ್ತು. ಕೋಳಿ ಸಿಕ್ಕಿ ಹಾಕಿಕೊಂಡಿದ್ದರಿಂದ ಉಸಿರಾಟದ ಗಾಳಿ ಹೊರಗೆ ಹೋಗಲು ಮತ್ತು ಬರಲು ಇರುವ ಅಪಧಮನಿಗಳು ಬಂದ್ ಆಗಿದ್ದವು. ಇದರಿಂದ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ.
ನನ್ನ ವೃತ್ತಿಜೀವನದಲ್ಲಿ 15 ಸಾವಿರ ಮರಣೋತ್ತರ ಪರೀಕ್ಷೆ ನಡೆಸಿದ್ದು, ಇದೇ ಮೊದಲ ಬಾರಿ ಇಂತಹ ವಿಚಿತ್ರ ಘಟನೆ ನೋಡಿ ಆಘಾತವಾಯಿತು. ಕೋಳಿ ನುಂಗಿದ ವ್ಯಕ್ತಿ ಉಸಿರುಗಟ್ಟಿ ಮೃತಪಟ್ಟಿದ್ದರೆ, ಕೋಳಿ ಜೀವಂತವಾಗಿ ಸಿಕ್ಕಿದೆ ಎಂದು ವೈದ್ಯ ಸಂತು ಭಾಗ್ ತಿಳಿಸಿದ್ದಾರೆ.
ಪೊಲೀಸರು ಈ ವಿಚಿತ್ರ ಘಟನೆಯ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.