ವಸತಿ ಶಾಲೆಯಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟಕ್ಕೆ ಇಳಿದ ಧಂಗೆ ಎದ್ದ ಮಕ್ಕಳು ಎಂಬ ಕನ್ನಡ ಸಿನಿಮಾ ಮಾದರಿಯಲ್ಲಿಯೇ ಶಾಲಾ ಮಕ್ಕಳು ವಸತಿ ಶಾಲೆಯ ಪ್ರಿನ್ಸಿಪಾಲ್ ಮತ್ತು ಮೇಲ್ವಿಚಾರಕರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದ ಘಟನೆ ಬೀದರ್ ಜಿಲ್ಲೆಯ ಔರಾದ್ ನಲ್ಲಿ ನಡೆದಿದೆ.
6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಗಾಯ ಆಗುವ ರೀತಿ ಹಲ್ಲೆ ನಡೆಸಿದ ಸಂತಪೂರ ಮುರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಮತ್ತು ಮೇಲ್ವಿಚಾರಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಸಂತಪೂರ ಮುರಾರ್ಜಿ ವಸತಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ರವಿದಾಸ ಧರ್ಮ ಮೇಲೆ ಹಲ್ಲೆ ನಡೆಸಿದರಿಂದ ಬೆನ್ನಿಗೆ ಗಾಯವಾಗಿದೆ. 7ನೇ ತರಗತಿಯ ವಿದ್ಯಾರ್ಥಿ ಅಜಿತ್ ವೆಂಕಟ ಎನ್ನುವ ವಿದ್ಯಾರ್ಥಿಯ ಕೈಗೆ ಗಾಯವಾಗಿದ್ದು, ವಿದ್ಯಾರ್ಥಿಗಳು ಪ್ರಾಂಶುಪಾಲ ಮತ್ತು ಹಾಸ್ಟಲ್ ವಾರ್ಡನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಾಂಶುಪಾಲ, ವಾರ್ಡನ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಅಮಾನವೀಯವಾಗಿ ವರ್ತಿಸಿದ್ದಾರೆ. ಕೂಡಲೇ ತಪ್ಪಿತಸ್ಥರನ್ನು ಅಮಾನತು ಮಾಡಬೇಕು ಎಂದು ಶಾಲಾ ಮಕ್ಕಳು ತರಗತಿಗಳನ್ನು ಬಹಿಷ್ಕರಿಸಿ ಆಗ್ರಹಿಸಿದ್ದಾರೆ.
ಪಾಲಕರು ಕೂಡ ಮಕ್ಕಳ ಪ್ರತಿಭಟನೆಗೆ ಕೈ ಜೋಡಿಸಿದ್ದು, ವಸತಿ ಶಾಲೆಯ ಅವ್ಯವಸ್ಥೆ ಖಂಡಿಸಿದರು. ವಸತಿ ನಿಲಯದಲ್ಲಿ ಮಕ್ಕಳಿಗೆ ಸರಿಯಾಗಿ ಊಟ ಸಿಗುತ್ತಿಲ್ಲ. ಊಟದಲ್ಲಿ ಹುಳ ಬರುತ್ತಿವೆ. ಇದನ್ನು ವಾರ್ಡನ್ ಅವರಿಗೆ ಪ್ರಶ್ನಿಸಿದರೆ ಹೊಡೆಯುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಕಣ್ಣೀರು ಹಾಕಿದರು.
ನಾನಾ ಸಮಸ್ಯೆಗಳಿಂದ ವಸತಿ ಶಾಲೆಯಲ್ಲಿ ಕಲಿಕೆಗೆ ಪೂರಕ ವಾತವರಣ ಇಲ್ಲದಂತಾಗಿದ್ದು, ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳಿಗೆ, ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನ ಇಲ್ಲದಂತಾಗಿದೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಉಪನಿರ್ದೇಶಕರ ವಿರುದ್ಧ ಆಕ್ರೋಶ
ವಸತಿ ನಿಲಯದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಿಂಧು ತೆಗ್ಗಿನೋರ ಅವರಿಗೆ ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ ಎಂದು ಪಾಲಕರು ಉಪನಿರ್ದೇಶಕ ವಿರುದ್ಧ ಆಕ್ರೋಶ ಹೊರಹಾಕಿದರು. ಇಲಾಖೆಯ ಮೇಲಾಧಿಕಾರಿಗಳ ಕುಮ್ಮಕ್ಕಿನಿಂದ ಇಲ್ಲಿಯ ಪ್ರಾಂಶುಪಾಲ, ವಾರ್ಡನ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆಯೋಗದ ಸದಸ್ಯರಿಗೆ ದೂರು
ವಸತಿ ಶಾಲೆಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ಘಟನೆಯ ಕುರಿತು ಪಾಲಕರು, ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಿಶಿಧರ ಕೋಸಂಬೆ ಅವರಿಗೆ ದೂರವಾಣಿ ಕರೆ ಮಾಡುವ ಮೂಲಕ ದೂರು ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಮೂಲಕ ತಪ್ಪಿಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಭರವಸೆ ನೀಡಿದರು.