ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ತಿಲಕ್ ವರ್ಮಾ ಸಿಡಿಸಿದ ಚೊಚ್ಚಲ ಶತಕದ ನೆರವಿನಿಂದ ಭಾರತ ತಂಡ ಮೂರನೇ ಟಿ-20 ಪಂದ್ಯದ ಗೆಲ್ಲಲು ದಕ್ಷಿಣ ಆಫ್ರಿಕಾ ತಂಡಕ್ಕೆ 220 ರನ್ ಗಳ ಬೃಹತ್ ಮೊತ್ತದ ಗುರಿ ಒಡ್ಡಿದೆ.
ಸೆಂಚೂರಿಯನ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 219 ರನ್ ಸಂಪಾದಿಸಿತು.
ಸರಣಿಯ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲಿ ಖಾತೆ ತೆರೆಯುವ ಮುನ್ನವೇ ಔಟಾಗಿದ್ದರಿಂದ ತಂಡ ಆಘಾತಕ್ಕೆ ಒಳಗಾಯಿತು. ಆದರೆ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಅಭಿಷೇಕ್ ಶರ್ಮ ಮತ್ತು ತಿಲಕ್ ವರ್ಮಾ ಎರಡನೇ ವಿಕೆಟ್ ಗೆ 107 ರನ್ ಜೊತೆಯಾಟದಿಂದ ತಂಡ ಬೃಹತ್ ಮೊತ್ತದ ಕನಸು ಕಾಣುವಂತೆ ಮಾಡಿದರು.
ತಿಲಕ್ ವರ್ಮಾ 56 ಎಸೆತಗಳಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್ ಒಳಗೊಂಡ ಅಜೇಯ 107 ರನ್ ಬಾರಿಸಿ ಚೊಚ್ಚಲ ಶತಕದ ಗೌರವಕ್ಕೆ ಪಾತ್ರರಾದರು. ಅಭಿಷೇಕ್ ಶರ್ಮಾ 25 ಎಸೆತಗಳಲ್ಲಿ 3 ಬೌಂಡರಿ ಮತ್ತು 5 ಸಿಕ್ಸರ್ ಸೇರಿದಂತೆ 50 ರನ್ ಗಳಿಸುವ ಮೂಲಕ ಅರ್ಧಶತಕ ಗಳಿಸಿದರು.
ನಾಯಕ ಸೂರ್ಯ ಕುಮಾರ್ ಯಾದವ್ (1) ವಿಫಲರಾದರು. ಹಾರ್ದಿಕ್ ಪಾಂಡ್ಯ (18) ಮತ್ತು ರಮಣದೀಪ್ ಸಿಂಗ್ (15) ತಂಡ 200ರ ಗಡಿ ತಲುಪಲು ನೆರವಾದರು. ದಕ್ಷಿಣ ಆಫ್ರಿಕಾ ಪರ ಆಂಡಿಲ್ ಸಿಮೆಲಿನ್ ಮತ್ತು ಕೇಶವ್ ಮಹರಾಜ್ ತಲಾ 2 ವಿಕೆಟ್ ಗಳಿಸಿದರು.