ಹೊಸದಿಲ್ಲಿ: ವಾಹನವನ್ನು ಮೂರನೇ ವ್ಯಕ್ತಿಗೆ ಮಾರಾಟ ಮಾಡಿದ ನಂತರ ಆತನ ಸಾರಿಗೆ ನೋಂದಣಿ ಮಾಡಿಸಲು ತಪ್ಪಿದರೇ ಮೂಲ ಮಾಲೀಕರನ್ನು ಸಂಕಷ್ಟಕ್ಕೆ ದೂಡುವ ನಿಯಮವನ್ನು ಸರಕಾರ ಕಟ್ಟುನಿಟ್ಟಾಗಿ ಜಾರಿಗೆ ತರಲು ತೀರ್ಮನಿಸಿದೆ.
ವಾಹನ ಮಾರಾಟವಾಗಿ ಸುಮಾರು ದಿನಗಳೇ ಆದರೂ ಆ ವಾಹನದ ದಾಖಲೆಯು ನಿಮ್ಮ ಹೆಸರಿನಲ್ಲೇ ಇದ್ದರೆ ತಕ್ಷಣವೇ ವಾಹನಗಳನ್ನು ಕೊಂಡವರಿಗೆ 14 ದಿನಗಳೊಳಗೆ ಅವರ ಹೆಸರಿಗೆ ವರ್ಗಾಯಿಸುವಂತೆ ಕೇಳಿಕೊಳ್ಳಬೇಕು.
ಕೇಂದ್ರ ಮೋಟಾರು ವಾಹನಗಳ ಇಲಾಖೆಯು (ಎಂವಿಡಿ) ಈ ಕುರಿತಾದ ನಿಯಮವೊಂದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದೆ. ಅದರಂತೆ, ವಾಹನ ಮಾರಾಟವಾದ 14 ದಿನಗಳಲ್ಲಿ, ಅಂದರೆ, ಎರಡು ವಾರಗಳಲ್ಲಿ ವಾಹನದ ಅಷ್ಟೂ ದಾಖಲೆಗಳು ಕೊಂಡವರ ಹೆಸರಿಗೆ ಕಡ್ಡಾಯವಾಗಿ ವರ್ಗಾವಣೆಯಾಗಬೇಕು.
ಈ ನಿಯಮವನ್ನು ಉಲ್ಲಂಘಿಸಿದರೆ, ಕೊಂಡವರು ಆ ವಾಹನದಿಂದ ಏನಾದರೂ ಆಕ್ಸಿಡೆಂಟ್ ಮಾಡಿಕೊಂಡರೆ ಅಥವಾ ಯಾವುದಾದರೂ ಕ್ರಿಮಿನಲ್ ಕೃತ್ಯಗಳಿಗೆ ಬಳಸಿದರೆ ಆ ಕಾರಿನ ಮಾಲೀಕತ್ವ ದಾಖಲೆಗಳು ಯಾರ ಹೆಸರಿನಲ್ಲಿ ಇರುವುದೋ ಅವರಿಗೇ ನೋಟೀಸ್ ಜಾರಿ ಮಾಡಲಾಗುತ್ತದೆ.
ಈ ನಿಯಮ ಹೊಸದಲ್ಲವಾದರೂ ಈಗ ಅದಕ್ಕೆ ಸಮಯದ ಅವಧಿ ನಿಗದಿ ಮಾಡಲಾಗಿದೆ. ವಾಹನ ಕೊಂಡವರ ಹೆಸರಿಗೆ ದಾಖಲೆಗಳು ವರ್ಗಾವಣೆಯಾಗದಿದ್ದರೆ ಮೂಲ ಓನರ್‌ಗೆ ಕಿರಿಕಿರಿ ಉಂಟಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ.
ಆದರೆ, ಆ ದಾಖಲೆಗಳ ವರ್ಗಾವಣೆ ಎಷ್ಟು ದಿನದೊಳಗೆ ಮುಗಿಸಬೇಕು ಎಂಬುದಕ್ಕೆ ಈಗ ಕೇಂದ್ರ ಮೋಟಾರು ವಾಹನ ಇಲಾಖೆ 14 ದಿನಗಳ ಗಡುವನ್ನು ನೀಡಿದೆ.
ಸ್ಥಳೀಯ ಆರ್ ಟಿಒ ಕಚೇರಿಗೆ ತೆರಳಿದರೆ ಅಲ್ಲಿ ವಾಹನ ದಾಖಲೆಗಳ ವರ್ಗಾವಣೆಗಾಗಿ ಇರುವ ಅರ್ಜಿ ನಮೂನೆ ಸಿಗುತ್ತದೆ. ಆ ಅರ್ಜಿಯನ್ನು ತುಂಬಿ ನಿಗದಿ ಶುಲ್ಕದೊಂದಿಗೆ ಇದನ್ನು ಸಲ್ಲಿಸಬೇಕು.
ಇದು ವಾಹನ ಕೊಂಡವರ ಜವಾಬ್ದಾರಿಯಾಗಿರುತ್ತದೆ. ವಾಹನ ಕೊಂಡ 14 ದಿನಗಳೊಳಗೆ ಈ ಅರ್ಜಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅಲ್ಲಿ ನೀವು ಕೊಡುವ ಮೊಬೈಲ್ ನಂಬರ್ ಅನ್ನು ಒಟಿಪಿ ನಂಬರ್ ನಿಂದ ಖಾತ್ರಿ ಪಡಿಸಿಕೊಳ್ಳಲಾಗುತ್ತದೆ.
15 ವರ್ಷ ಹಳೆಯದಾದ ವಾಹನವಾಗಿದ್ದರೆ, ಅದರ ಮೂಲ ಮಾಲೀಕರು 200 ರೂ. ಮೌಲ್ಯದ ಸ್ಟಾಂಪ್ ಪೇಪರಿನ ಮೇಲೆ ವಾಹನದ ತಮ್ಮದೆಂದು ಘೋಷಿಸಿಕೊಳ್ಳಬೇಕು. ಅಂದರೆ, ಅಫಿಡವಿಟ್ ಮಾಡಿಸಬೇಕು. ಒಂದು ವೇಳೆ ನಿಮ್ಮ ವಾಹನವನ್ನು ಸರ್ಕಾರದ ಗುಜರಿ ನೀತಿಯಡಿ ಗುಜರಿಗೆ ಹಾಕಿದರೂ ವಾಹನಗಳ ದಾಖಲೆಗಳು ಬದಲಾಗಲೇಬೇಕಿರುತ್ತದೆ.
ಗುಜರಿಗೆ ಹಾಕಿದ ನಂತರ ಎಷ್ಟೋ ಕಡೆ ಆ ಕಾರುಗಳು ಕ್ರಿಮಿನಲ್ ಚಟುವಟಿಕೆಗಳಿಗೆ ಬಳಸಿದ ಉದಾಹರಣೆಯಿವೆ. ಅಲ್ಲಿಯೂ ಸಹ ಗುಜರಿಗೆ ಹಾಕಿದ ನಂತರ ಕ್ಲಿಯರೆನ್ಸ್ ಪ್ರಮಾಣಪತ್ರ ಪಡೆಯುವುದು ಅವಶ್ಯಕತೆಯಿರುತ್ತದೆ.