ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ದಂಡ ಪಾವತಿಗೆ ಅನುಕೂಲವಾಗಲು ಕರ್ನಾಟಕ ಪೊಲೀಸರು ಹೊಸದಾಗಿ ವೆಬ್ ಸೈಟ್ ಆರಂಭಿಸಿದೆ.
ಸಂಚಾರಿ ಪೊಲೀಸ್ ಹೆಚ್ಚುವರಿ ನಿರ್ದೇಶಕ ಅಲೋಕ್ ಕುಮಾರ್, ವಾಹನ ಸವಾರರು ದಂಡ ಪಾವತಿಸಲು ಕರ್ನಾಟಕ ಪೊಲೀಸ್ ಇಲಾಖೆ ವೆಬ್ ಸೈಟ್ ಆರಂಭಿಸಿದೆ ಎಂದು ಎಕ್ಸ್ ನಲ್ಲಿ url: https://payfine.mchallan.com:7271 ಲಿಂಕ್ ಪೋಸ್ಟ್ ಮಾಡಿದ್ದಾರೆ.
ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಪೊಲೀಸ್ ಠಾಣೆಗೆ ಬಂದು ದಂಡ ಪಾವತಿಸುವುದರಿಂದ ವಾಹನ ಸವಾರರಿಗೆ ಆಗುತ್ತಿರುವ ಅನಾನುಕೂಲ ತಪ್ಪಿಸಲು ವೆಬ್ ಸೈಟ್ ಆರಂಭಿಸಲಾಗಿದ್ದು, ಇದರಿಂದ ವಾಹನ ಸವಾರರು ಆನ್ ಲೈನ್ ನಲ್ಲಿ ಪಾವತಿಸಬಹುದು ಎಂದು ತಿಳಿಸಿದ್ದಾರೆ.
ವೆಬ್ ಸೈಟ್ ಬಗ್ಗೆ ನಾಗರಿಕರು ಅನುಮಾನ ವ್ಯಕ್ತಪಡಿಸಿದ್ದು, ಅಪಘಾತ ಹಾಗೂ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರ ವಿವರಗಳನ್ನು ಯಾರೂ ಬೇಕಾದರೂ ಪಡೆಯಬಹುದಾಗಿದ್ದು, ಇದರ ದುರ್ಬಳಕೆ ಆಗುವ ಸಾಧ್ಯತೆ ಇದೆ. ಏಕೆಂದರೆ ವಾಹನ ಮತ್ತು ಸವಾರರ ವಿವರಗಳು ಮಾಸ್ಕ್ ಮಾಡಲಾಗಿಲ್ಲ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.