ನವದೆಹಲಿ: ನೀಟ್ ಯುಜಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಗಂಭೀರ ಲೋಪಗಳಾದಾಗ ಅದರ ಹೊಣೆಗಾರಿಕೆ ಮತ್ತು ಸ್ವಾಯತ್ತತೆ ಅಗತ್ಯ. ಪದೇಪದೆ ಈ ರೀತಿ ಘಟನೆಗಳು ಆಗುತ್ತಿದ್ದರೂ ಎಚ್ಚರಗೊಳ್ಳದೇ ಇಲ್ಲ. ಮುಂದಿನ ದಿನಗಳಲ್ಲಿ ಯುವ ಸಮುದಾಯವನ್ನು ನಿರಾಸೆಗೊಳಿಸಬೇಡಿ ಎಂದು ಎನ್ ಟಿಎಗೆ ಸುಪ್ರೀಂಕೋರ್ಟ್ ಚಾಟಿ ಬೀಸಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ನ್ಯಾಯಮೂರ್ತಿ ಅಲೋಕ್ ಆರಾಧೆ ಅವರನ್ನೊಳಗೊಂಡ ವಿಭಾಗೀಯ ಪೀಠ ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವಿಚಾರಣೆ ಶುಕ್ರವಾರವೂ ಮುಂದುವರಿಸಿದ್ದು, ಎನ್ ಟಿಎ ಸಂಸ್ಥೆಯನ್ನು ಪುನರಚಿಸಬೇಕು ಮತ್ತು ಸ್ವಾಯತ್ತ ಸಂಸ್ಥೆಯನ್ನಾಗಿ ಪರಿವರ್ತಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿತು.
ಪ್ರಶ್ನೆ ಪತ್ರಿಕೆ ಸೋರಿಕೆ ಮುಂತಾದ ಪ್ರಕರಣಗಳಿಂದ ವಿದ್ಯಾರ್ಥಿಗಳ ಮೇಲೆ ಮಾತ್ರವಲ್ಲ, ಅವರ ಕುಟುಂಬದ ಮೇಲೂ ಭಾರೀ ಪರಿಣಾಮ ಬೀರುತ್ತದೆ. ಪರೀಕ್ಷೆಗಾಗಿ ವಿದ್ಯಾರ್ಥಿಗಳು ಮಾನಸಿಕವಾಗಿ ಸಿದ್ಧರಿರುತ್ತಾರೆ. ಆದರೆ ಇಂತಹ ಘಟನೆಗಳಿಂದ ಅವರ ಮನಸ್ಸಿನ ಮೇಲೆ ದೊಡ್ಡ ಹೊಡೆತ ಬೀಳುತ್ತದೆ. ಆದ್ದರಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಘಟನೆಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.
ಯುಪಿಎಸ್ ಇ ಪರೀಕ್ಷೆ ಮಾದರಿಯನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್, ಪಾರದರ್ಶಕತೆ ಕುರಿತು ನೀವು ಅವರನ್ನು ನೋಡಿ ಕಲಿಯಬೇಕಾಗಿದೆ. ನಿಜವಾದ ಹೊಣೆಗಾರಿಕೆ ಗಮನಿಸದೇ ಇದ್ದರೆ ಈ ರೀತಿಯ ಲೋಪಗಳು ಉಂಟಾಗುತ್ತವೆಎ ಎಂದು ಹೇಳಿತು.



