ಬೆಂಗಳೂರು: ರಾಜ್ಯದಲ್ಲಿ ಪ್ರಸ್ತಾಪಿಸಲಾಗಿರುವ 13 ರೋಪ್‌ವೇ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇಂದು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಕೆ.ವಿ. ತ್ರಿಲೋಕ್ ಚಂದ್ರ, ಆಯುಕ್ತರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ವಿವಿಧ ರೋಪ್‌ವೇ ಯೋಜನೆಗಳ ಪ್ರಗತಿಯನ್ನು ಸಚಿವರು ಸಮಗ್ರವಾಗಿ ಪರಿಶೀಲಿಸಿದರು.
ಸಭೆಯಲ್ಲಿ ಹಲವು ವರ್ಷಗಳಿಂದ ರೋಪ್‌ವೇ ಯೋಜನೆಗಳು ಪ್ರಸ್ತಾಪದ ಹಂತದಲ್ಲಿಯೇ ಉಳಿದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಯೋಜನೆಗಳಿಗೆ ಟೆಂಡರ್ ಆಹ್ವಾನಿಸುವ ಮುನ್ನವೇ ಅರಣ್ಯ, ಪರಿಸರ ಸೇರಿದಂತೆ ಸಂಬಂಧಿತ ಎಲ್ಲ ಇಲಾಖೆಗಳ ಅಗತ್ಯ ಅನುಮತಿಗಳನ್ನು ಪಡೆದುಕೊಳ್ಳುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇದರಿಂದ ಯೋಜನೆಗಳ ಅನುಷ್ಠಾನದಲ್ಲಿ ಅನಗತ್ಯ ವಿಳಂಬ ತಪ್ಪಿಸಿ ನಿಗದಿತ ಸಮಯದಲ್ಲಿ ಕಾಮಗಾರಿ ಆರಂಭಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ರಾಜ್ಯದ 13 ರೋಪ್‌ವೇ ಯೋಜನೆಗಳಿಗೆ ಕಾರ್ಯಸಾಧ್ಯತಾ ವರದಿ (Feasibility Study) ಸಿದ್ಧಪಡಿಸುವ ಜವಾಬ್ದಾರಿಯನ್ನು RITES ಸಂಸ್ಥೆಗೆ ವಹಿಸಲಾಗಿದ್ದು, ಈಗಾಗಲೇ 8 ಯೋಜನೆಗಳ ವರದಿಗಳು ಪೂರ್ಣಗೊಂಡಿವೆ. ಉಳಿದ ಯೋಜನೆಗಳ ಕಾರ್ಯಸಾಧ್ಯತಾ ವರದಿಗಳನ್ನು ಆದ್ಯತೆಯ ಮೇರೆಗೆ ಶೀಘ್ರ ಪೂರ್ಣಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಮುಳ್ಳಯ್ಯನಗಿರಿ ರೋಪ್‌ವೇ ಯೋಜನೆಗೆ ಅಗತ್ಯ ಅನುಮತಿಗಳ ಕೊರತೆಯಿಂದ ಕಾರ್ಯಸಾಧ್ಯತಾ ವರದಿ ವಿಳಂಬವಾಗಿರುವುದನ್ನು ಗಮನಿಸಿದ ಸಚಿವರು, RITES ಸಂಸ್ಥೆಗೆ ತಕ್ಷಣವೇ ಅಗತ್ಯ ಅನುಮತಿಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿ, ಒಂದು ತಿಂಗಳೊಳಗೆ ಕಾರ್ಯಸಾಧ್ಯತಾ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.
ಬೆಳಗಾವಿ ಜಿಲ್ಲೆಯ ಗೋಕಾಕ್ ಜಲಪಾತ, ಯಾದಗಿರಿ ಜಿಲ್ಲೆಯ ಮೈಲಾರ ಲಿಂಗೇಶ್ವರ ದೇವಸ್ಥಾನ, ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಹಾಗೂ ಹಾವೇರಿ ಜಿಲ್ಲೆಯ ದೇವರಗುಡ್ಡ ಮಾಲತೇಶ ದೇವಸ್ಥಾನದ ರೋಪ್‌ವೇ ಯೋಜನೆಗಳಿಗೆ ಪ್ರಾಥಮಿಕ ಕಾರ್ಯಸಾಧ್ಯತಾ ವರದಿಗಳು ಈಗಾಗಲೇ ಸಿದ್ಧಗೊಂಡಿದ್ದು, ಗೋಕಾಕ್ ರೋಪ್‌ವೇ ಯೋಜನೆಗೆ ಹಣಕಾಸು ಇಲಾಖೆಯ ಅನುಮತಿಯೂ ದೊರೆತಿದೆ. ಈ ಯೋಜನೆಯನ್ನು ಮುಂದಿನ ಸಚಿವ ಸಂಪುಟ ಸಭೆಯ ಅನುಮೋದನೆಗೆ ಮಂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದರು.
ರೋಪ್‌ವೇ ಯೋಜನೆಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಯೋಜನೆಗಳು ನಿಗದಿತ ಸಮಯದಲ್ಲಿ ಆರಂಭವಾಗಲು ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳ ಅನುಮತಿಗಳನ್ನು ಆದ್ಯತೆಯ ಮೇರೆಗೆ ಪಡೆಯಬೇಕು ಎಂದು ಸಚಿವರು ತಿಳಿಸಿದರು. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಆಯುಕ್ತರು ದೆಹಲಿಗೆ ತೆರಳಿ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಅನುಮತಿಗಳನ್ನು ತ್ವರಿತವಾಗಿ ಪಡೆಯುವಂತೆ ಅವರು ನಿರ್ದೇಶಿಸಿದರು.
ಈ ರೋಪ್‌ವೇ ಯೋಜನೆಗಳ ಅನುಷ್ಠಾನದಿಂದ ರಾಜ್ಯದ ಪ್ರಮುಖ ಧಾರ್ಮಿಕ, ಪಾರಂಪರಿಕ ಹಾಗೂ ಪ್ರಕೃತಿ ಪ್ರವಾಸಿ ತಾಣಗಳಿಗೆ ಸುಲಭ ಸಂಪರ್ಕ ಕಲ್ಪಿಸುವುದರ ಜೊತೆಗೆ, ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸಿ, ಪ್ರವಾಸೋದ್ಯಮ ಆಧಾರಿತ ಸ್ಥಳೀಯ ಆರ್ಥಿಕ ಅಭಿವೃದ್ಧಿಗೆ ಹೊಸ ಚೈತನ್ಯ ನೀಡುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಸಚಿವರು ಹೇಳಿದರು.



