ಫುಟ್ಬಾಲ್ ದಂತಕತೆ ಲಿಯೊನೆಲ್ ಮೆಸ್ಸಿ ಹಾಗೂ ಅವರ ಅರ್ಜೆಂಟೀನಾ ತಂಡ ಭಾರತಕ್ಕೆ ಭೇಟಿ ನೀಡಲಿದ್ದು, ಪ್ರದರ್ಶನ ಪಂದ್ಯದಲ್ಲಿ ಕಾಲ್ಚಳಕ ತೋರಲಿದ್ದಾರೆ.
ಹೌದು, ಅಕ್ಟೋಬರ್ ನಲ್ಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡ ಹಾಗೂ ತಂಡದ ನಾಯಕ ಹಾಗೂ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಭಾರತಕ್ಕೆ ಆಗಮಿಸಲಿದ್ದು, ಕೇರಳದಲ್ಲಿ ಪ್ರದರ್ಶನ ಪಂದ್ಯದಲ್ಲಿ ಆಡಲಿದ್ದಾರೆ.
ಕಳೆದ ನವೆಂಬರ್ ನಲ್ಲಿ ಕೇರಳ ಕ್ರೀಡಾ ಸಚಿವ ಅಬ್ದುರಹೀಂ ಅರ್ಜೆಂಟೀನಾ ತಂಡ ಭಾರತಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಇದೀಗ ಈ ವಿಷಯ ದೃಢಪಟ್ಟಿದ್ದು, ಕೊಚ್ಚಿಯಲ್ಲಿ ಅರ್ಜೆಂಟೀನಾ ತಂಡ ಸೌಹಾರ್ದ ಪಂದ್ಯದಲ್ಲಿ ಆಡಲಿದೆ.
ಮಾರ್ಚ್ 26ರಂದು ಎಚ್ ಎಸ್ ಬಿಸಿ ಅರ್ಜೆಂಟೀನಾ ತಂಡಕ್ಕೆ ಅಧಿಕೃತವಾಗಿ ಸಹಭಾಗಿತ್ವ ಹೊಂದಿದ್ದು, ಇದೇ ವೇಳೆ ಅಕ್ಟೋಬರ್ ನಲ್ಲಿ ಅರ್ಜೆಂಟೀನಾ ತಂಡ ಕೇರಳಕ್ಕೆ ಭೇಟಿ ನೀಡಲಿದ್ದು, ಪ್ರದರ್ಶನ ಪಂದ್ಯದಲ್ಲಿ ಆಡಲಿದೆ ಎಂದು ತಿಳಿಸಿದೆ.
2011 ಸೆಪ್ಟೆಂಬರ್ ನಲ್ಲಿ ಲಿಯೊನೆಲ್ ಮೆಸ್ಸಿ ಭಾರತಕ್ಕೆ ಮೊದಲ ಬಾರಿ ಭೇಟಿ ನೀಡಿದ್ದರು. ಕೋಲ್ಕತಾದಲ್ಲಿ ನಡೆದ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ವೆನಿಜುವೆಲಾ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ 1-0ಯಿಂದ ಗೆದ್ದಿತ್ತು.



