ಬೆಂಗಳೂರು: ಪ್ರಿಯತಮೆಗೆ ಹಣ, ಆಭರಣ ಕೊಡಲು ತಮ್ಮ ಸಂಬಂಧಿಕರ ಮನೆಯಲ್ಲಿಯೇ ನಗದು ಸೇರಿದಂತೆ 52.71 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ನಾಟಕವಾಡಿದ್ದ ಯುವಕನನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಗಟ್ಟಿಹಳ್ಳಿಯ ಶ್ರೇಯಸ್ (22) ಬಂಧಿತ ಆರೋಪಿ.
ತಮ್ಮದೇ ಊರಿನ ಸಂಬಂಧಿಕರಾದ ಹರೀಶ್ ಎಂಬುವವರ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಶ್ರೇಯಸ್ ಸೆ.14ರಂದು ಹರೀಶ್ ಅವರ ತಾಯಿ ಮನೆಗೆ ಬೀಗಹಾಕಿ ಪಕ್ಕದ ಬೀದಿಯಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದಾಗ ಬೀಗ ಮುರಿದು ಕಳ್ಳತನ ಮಾಡಿದ್ದ.
ಮನೆಯ ಬೀಗ ಮುರಿದು 3.46 ಲಕ್ಷ ರೂ. ನಗದು, 416 ಗ್ರಾಂ ಚಿನ್ನವನ್ನು ದೋಚಿ ಹೋಗಿದ್ದ ಶ್ರೇಯಸ್, ಆಭರಣಗಳನ್ನು ಬನ್ನೇರುಘಟ್ಟದಲ್ಲಿ ವಾಸವಿರುವ ತನ್ನ ಪ್ರಿಯತಮೆಗೆ ಕೊಟ್ಟಿದ್ದು, ಉಳಿದ ಆಭರಣಗಳನ್ನು ಪರಪ್ಪನ ಅಗ್ರಹಾರದಲ್ಲಿರುವ ಮುತ್ತೂಟ್ ಫೈನಾನ್ಸ್ ನಲ್ಲಿ ಅಡವಿಟ್ಟಿದ್ದ.
ನಗದನ್ನು ಸೂರ್ಯಸಿಟಿಯಲ್ಲಿರುವ ಬ್ಯಾಂಕ್‌ನ ತನ್ನ ಖಾತೆಗೆ ಜಮಾ ಮಾಡಿಕೊಂಡಿದ್ದ.ನಂತರ ಹರೀಶ್ ಅವರ ಮನೆ ಬಳಿ ಬಂದ ಶ್ರೇಯಸ್ ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ನೀವು ಬೇಗ ಪೊಲೀಸರಿಗೆ ದೂರು ಕೊಡಿ ಎಂದು ಅವನೇ ಪೊಲೀಸರಿಗೆ ದೂರು ಕೊಡಿಸಿದ್ದ.
ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ ತಾಂತ್ರಿಕ ಸಾಕ್ಷ್ಯಾಧಾರದ ಮೇಲೆ ಶ್ರೇಯಸ್‌ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.ನಂತರ ಪೊಲೀಸರು ಆತನನ್ನು ಬಂಧಿಸಿ ಸಂಬಂಧಿಕರ ಮನೆಯಲ್ಲಿ ಕದ್ದಿದ್ದ ಹಣ, ಆಭರಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ವಾಕಿಂಗ್ ಹೋಗುತ್ತಿದ್ದ ಮಹಿಳೆಯ ಸರಗಳ್ಳ
86 ಗ್ರಾಂ ಮಾಂಗಲ್ಯ ಸರ ವಶಕೆರೆಯ ಬಳಿ ವಾಯುವಿಹಾರ ಮಾಡುತ್ತಿದ್ದ ಮಹಿಳೆಯೊಬ್ಬರ ಮಾಂಗಲ್ಯಸರ ಕಿತ್ತುಕೊಂಡು ಪರಾರಿಯಾಗಿದ್ದ ಸರಗಳ್ಳನನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿ 9 ಲಕ್ಷ ಮೌಲ್ಯದ 86 ಗ್ರಾಂ ತೂಕದ ಸರವನ್ನು ವಶಪಡಿಸಿಕೊಂಡಿದ್ದಾರೆ.
ಗೊಲ್ಲಹಳ್ಳಿಯ ನಿವಾಸಿ ನಿತಿನ್ ಬಂಧಿತ ಆರೋಪಿ. ಈತ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಾಗಿದ್ದ ಮಹಿಳೆಯೊಬ್ಬರು ಸೆ.12ರಂದು ಮಾರುಗೊಂಡನಹಳ್ಳಿಯ ಕೆರೆ ಬಳಿ ವಾಕಿಂಗ್ ಮಾಡುತ್ತಿದ್ದಾಗ ಅವರ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾಗಿದ್ದನು.
ಈ ಸಂಬಂಧ ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡ ಪೊಲೀಸರು ಬಾತಿದಾರನಿಂದ ಬಂದ ಖಚಿತ ಮಾಹಿತಿಯನ್ನು ಕಲೆ ಹಾಕಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸರ ಅಪಹರಣ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಚಿನ್ನದ ಸರವನ್ನು ಹಾಸನದ ಆಭರಣ ಅಂಗಡಿಯೊಂದರಲ್ಲಿ ಅಡಮಾನ ಇಟ್ಟಿದ್ದ ಸುಮಾರು 9,03,000 ರೂ. ಮೌಲ್ಯದ 86 ಗ್ರಾಂ ತೂಕದ ಮಾಂಗ್ಯಲ ಸರವನ್ನು ವಶಪಡಿಸಿಕೊಂಡಿದ್ದಾರೆ. ಎಲೆಕ್ಟ್ರಾನಿಕ್‌ಸಿಟಿ ಉಪವಿಭಾಗದ ಉಪ ಪೊಲೀಸ್ ಆಯುಕ್ತ ನಾರಾಯಣ್ ಅವರ ಮಾರ್ಗದರ್ಶನದಲ್ಲಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಕೆ.ಎಂ.ಸತೀಶ್ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಸೋಮಶೇಖರ್ ಹಾಗೂ ಸಿಬ್ಬಂದಿಗಳ ತಂಡ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.



