ಬೆಳಗಾವಿ: ಕೊಟ್ಟ ಸಾಲದ ಹಣ ವಾಪಸ್ ಬಾರದೆ, ಅತ್ತ ನ್ಯಾಯ ಕೇಳಲು ಹೋದಾಗ ಪೊಲೀಸರಿಂದಲೇ ಬೆದರಿಕೆ ಎದುರಿಸಿ ಮನನೊಂದ ವ್ಯಕ್ತಿಯೊಬ್ಬರು ಡೆತ್‌ನೋಟ್‌ನಲ್ಲಿ ಡಿವೈಎಸ್‌ಪಿ ಹಾಗೂ ಪಿಎಸ್‌ಐ ಹೆಸರನ್ನು ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ಬೆಂಡಿಗೇರಿ ಗ್ರಾಮದಲ್ಲಿ ನಡೆದಿದೆ.
ಬೆಂಡಿಗೇರಿ ಗ್ರಾಮದ ನಿವಾಸಿ ರವೀಂದ್ರ ದಾನವ್ವಗೋಳ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಇವರ ಸಾವು ಹಾಗೂ ಡೆತ್‌ನೋಟ್‌ನಲ್ಲಿರುವ ಅಂಶಗಳು ಈಗ ಜಿಲ್ಲೆಯಾದ್ಯಂತ ತೀವ್ರ ಸಂಚಲನ ಮೂಡಿಸಿವೆ.
ಮೃತ ರವೀಂದ್ರ ಅವರು ಗ್ರಾಮದ ಲಕ್ಷ್ಮಣ್ ಚಂದರಗಿ ಮತ್ತು ಭರಮಪ್ಪ ಪೂಜಾರಿ ಎಂಬುವರಿಗೆ ಹಂತಹಂತವಾಗಿ ಒಟ್ಟು 8 ಲಕ್ಷ ರೂಪಾಯಿ ಸಾಲ ನೀಡಿದ್ದರು ಎನ್ನಲಾಗಿದೆ. ಆದರೆ, ದೀರ್ಘಕಾಲದ ಬಳಿಕವೂ ಆರೋಪಿಗಳು ಹಣವನ್ನು ವಾಪಸ್ ನೀಡಿರಲಿಲ್ಲ. ರವೀಂದ್ರ ಅವರು ತಮ್ಮ ಹಣವನ್ನು ಮರಳಿ ಕೇಳಿದಾಗ, ಆರೋಪಿಗಳು ಹಣ ಕೊಡುವುದನ್ನು ಬಿಟ್ಟು, ಅವರಿಗೆ ಪ್ರಾಣ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಆರೋಪಿಗಳಿಂದ ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ರವೀಂದ್ರ ಅವರು ತಮಗೆ ನ್ಯಾಯ ಕೊಡಿಸುವಂತೆ ಮೂಡಲಗಿ ವಲಯದ ಅಂದಿನ ಡಿವೈಎಸ್‌ಪಿ ಮುಲ್ಲಾ ಹಾಗೂ ಪಿಎಸ್‌ಐ ಆನಂದ್ ಅವರಿಗೆ ಮನವಿ ಮಾಡಿದ್ದರು. ಆದರೆ, ಸಾರ್ವಜನಿಕರ ರಕ್ಷಣೆಗೆ ನಿಲ್ಲಬೇಕಾದ ಪೊಲೀಸರು ರವೀಂದ್ರ ಅವರ ಅಳಲಿಗೆ ಕ್ಯಾರೇ ಎಂದಿಲ್ಲ. ಉಲ್ಟಾ ರವೀಂದ್ರ ಅವರಿಗೇ ಪೊಲೀಸರು ಹೆದರಿಸಿದ್ದರು ಎಂದು ಮೃತರು ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿರುವ ಡೆತ್‌ನೋಟ್‌ನಲ್ಲಿ ಗಂಭೀರವಾಗಿ ಉಲ್ಲೇಖಿಸಿದ್ದಾರೆ. ಆರೋಪಿಗಳ ವಂಚನೆ ಹಾಗೂ ಪೊಲೀಸರ ಅನ್ಯಾಯದಿಂದ ನೊಂದು ರವೀಂದ್ರ ಅವರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲು
ಘಟನಾ ಸ್ಥಳಕ್ಕೆ ಮೂಡಲಗಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತ ರವೀಂದ್ರ ಅವರ ಪತ್ನಿ ನೀಡಿದ ದೂರಿನನ್ವಯ ಹಣ ಪಡೆದ ಇಬ್ಬರು ಮುಖ್ಯ ಆರೋಪಿಗಳು ಸೇರಿದಂತೆ ಒಟ್ಟು 8 ಜನರ ವಿರುದ್ಧ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾನೂನು ರಕ್ಷಕರೇ ಭಕ್ಷಕರಾದರೆ ಸಾಮಾನ್ಯ ಜನರ ಕಥೆ ಏನು? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಡೆತ್‌ನೋಟ್‌ನಲ್ಲಿ ಇಲಾಖೆಯ ಉನ್ನತ ಅಧಿಕಾರಿಗಳ ಹೆಸರೇ ಇರುವುದರಿಂದ, ಸ್ಥಳೀಯ ಪೊಲೀಸರು ಇದನ್ನು ಮುಚ್ಚಿಹಾಕುವ ಸಾಧ್ಯತೆಯಿದೆ. ಆದ್ದರಿಂದ ಈ ಪ್ರಕರಣದ ಸತ್ಯಾಸತ್ಯತೆಯನ್ನು ಹೊರತರಲು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸೂಕ್ತ ಮತ್ತು ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸಿದ್ದಾರೆ.



