Sunday, May 31, 2026
Google search engine
Homeಅಪರಾಧಅತ್ತಿಗೆ ಕೊಲೆ ಮಾಡಿಸಿ ದರೋಡೆ ಕಥೆ ಕಟ್ಟಿದ ನಾದಿನಿ

ಅತ್ತಿಗೆ ಕೊಲೆ ಮಾಡಿಸಿ ದರೋಡೆ ಕಥೆ ಕಟ್ಟಿದ ನಾದಿನಿ

ಬೆಂಗಳೂರು: ಹಣಕ್ಕಾಗಿ ಅತ್ತಿಗೆಯನ್ನು ಕೊಲೆ ಮಾಡಿಸಿ ದರೋಡೆ ಕಥೆ ಕಟ್ಟಿದ ನಾದಿನಿ ಹಾಗೂ ಸೋದರ ಸಂಬಂಧಿಯನ್ನು ಕೃತ್ಯ ನಡೆಸಿದ ಕೇವಲ 24 ಗಂಟೆಯಲ್ಲೇ ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭವ್ಯಾ ಹಾಗೂ, ಲೋಹಿತ್ ಕುಮಾರ್‌ ಬಂಧಿತ ಆರೋಪಿಗಳಾಗಿದ್ದು,ಕೃತ್ಯಕ್ಕೆ ನೆರವು ನೀಡಿರುವ ಇನ್ನಿತರರ ವಿಚಾರಣೆ ನಡೆಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.

ಕಳೆದ ಮೇ 28ರ ರಾತ್ರಿ ಚಿಕ್ಕಬಳ್ಳಾಪುರದ ಕಂದವಾರ ಬಾಗಿಲು ಬಳಿಯ ಬಾಪೂಜಿ ನಗರದಲ್ಲಿ ಮೇಸ್ತ್ರಿ ನರಸಿಂಹಮೂರ್ತಿ ಅವರ ಸೊಸೆ ಪುಷ್ಪಲತಾ ಅವರ ಕತ್ತು ಸೀಳಿ ಬರ್ಬರ ಕೊಲೆ ಮಾಡಿ ಮಾಂಗಲ್ಯ ಸರ ಮತ್ತು ಕಿವಿಯೊಲೆ ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದರು.

ಪುಷ್ಪಲತಾ ಪಕ್ಕದಲ್ಲಿಯೇ ಮಲಗಿದ್ದ ನಾದಿನಿ ಭವ್ಯಾಳ ಬಾಯಿಗೆ ಬಟ್ಟೆ ತುರುಕಿ, ಮುಖಕ್ಕೆ ಸ್ಪ್ರೈ ಹೊಡೆಯಲಾಗಿದ್ದು, ಕೃತ್ಯದಿಂದ ಅಸ್ವಸ್ಥಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಕುರಿತು ಚಿಕ್ಕಬಳ್ಳಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ಷಿಪ್ರ ತನಿಖೆ ಕೈಗೊಂಡಿದ್ದರು.

ಮಗಳು ಕೊಲೆಯಾಗಿರುವ ಸುದ್ದಿ ತಿಳಿದು ಸ್ಥಳಕ್ಕೆ ಬಂದ ತಂದೆ ಮಹೇಶ್, ತಾಯಿ ಲಕ್ಷ್ಮೀ ಇದು ದರೋಡೆಯಲ್ಲ, ವ್ಯವಸ್ಥಿತ ಕೊಲೆ. ಅಳಿಯನ ಅಕ್ರಮ ಸಂಬಂಧದಿಂದ ಸುಪಾರಿ ಕೊಟ್ಟು ಮಗಳ ಕೊಲೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದರು. ಆದರೆ, ತನಿಖೆ ನಡೆಸುತ್ತಿದ್ದ ಪೊಲೀಸರು ಇದಕ್ಕೂ ಮೊದಲು ದರೋಡೆ ಪ್ರಕರಣ ಎಂದೇ ನಂಬಿದ್ದರು. ಆದರೆ, ಆಸ್ಪತ್ರೆಯಲ್ಲಿ ದಾಖಲಾಗಿದ್ದ ನಾದಿನಿ ಭವ್ಯಾಳನ್ನು ವಿಚಾರಣೆ ನಡೆಸಿದಾಗ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಭವ್ಯಾ ನೀಡಿದ ಹೇಳಿಕೆ ಮತ್ತು ದರೋಡೆ ಸಂಬಂಧ ನಡೆದಿದೆ ಎನ್ನಲಾದ ಕೊಲೆಗೂ ಹೊಂದಾಣಿಕೆ ಆಗುತ್ತಿರಲಿಲ್ಲ. ಇದರಿಂದ ಸಂಶಯಗೊಂಡ ಪೊಲೀಸರು ಮತ್ತಷ್ಟು ಪ್ರಶ್ನೆಗಳನ್ನು ಕೇಳಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ.

ಭವ್ಯಾ ಆಕೆಯ ಬಾಯ್ ಫ್ರೆಂಡ್ ಜೊತೆ ಖಾಸಗಿ ಕ್ಷಣಗಳ ವಿಡಿಯೋ ಆಕೆಯ ಸೋದರ ಸಂಬಂಧಿ ಹೊಸಕೋಟೆಯ ಲೋಹಿತ್ ಕುಮಾರ್ ಅಲಿಯಾಸ್ ಲೂಲ್ ಯಾದವ್ ಬಳಿ ಇತ್ತು. ಈ ವಿಡಿಯೋ ಮೂಲಕ ಆಕೆಗೆ ಬ್ಲ್ಯಾಕ್‌ಮೇಲ್ ಮಾಡಿ 4 ಲಕ್ಷ ರೂ ಸುಲಿಗೆ ಮಾಡಿ ಬಳಿಕ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.

ಈ ವಿಷಯ ಭವ್ಯಾಳ ತಾಯಿ ವಿಜಯಲಕ್ಷ್ಮಿಗೂ ಗೊತ್ತಾಗಿತ್ತು. ಹಣಕ್ಕಾಗಿ ಸೊಸೆಯ ಕೊರಳಲ್ಲಿದ್ದ ಮಾಂಗಲ್ಯ ಸರ ದೋಚುವ ಪ್ಲಾನ್ ಮಾಡಿದ್ದರು. ಅದರಂತೆ ಲೋಹಿತ್​ನನ್ನು ಕರೆದ ಭವ್ಯಾ, ಪುಷ್ಪಲತಾ ಕೊರಳಲ್ಲಿರುವ ಮಾಂಗಲ್ಯ ಸರ ದೋಚುವಂತೆ ಹೇಳಿದ್ದಳು.

ಮಗಳ ಪ್ಲಾನ್​ಗೆ ಸಾಥ್ ಕೊಟ್ಟ ವಿಜಯಲಕ್ಷ್ಮಿ ತನ್ನ ಗಂಡ ನರಸಿಂಹಮೂರ್ತಿ ಹಾಗೂ ಮಗ ಭರತ್​ನನ್ನು ಕರೆದುಕೊಂಡು ತಮಿಳುನಾಡಿನ ದೇವಸ್ಥಾನಕ್ಕೆ ಹೋಗಿದ್ದಳು ಎಂದು  ತಿಳಿಸಿದ್ದಾರೆ.

ಪುಷ್ಪಲತಾ ಹಾಗೂ ಆಕೆಯ ಪತಿ ಭರತ್​ ಪ್ರತ್ಯೇಕವಾಗಿ ವಾಸವಿದ್ದರು. ಪತಿಯ ಕುಟುಂಬದ ಜತೆ ದೇವಾಲಯಕ್ಕೆ ಹೋಗಿದ್ದ ಕಾರಣ ಆ ದಿನ ಅತ್ತೆಯ ಮನೆಗೆ ಬಂದು ಮಲಗಿದ್ದಳು. 28ರ ರಾತ್ರಿ ಮನೆಗೆ ಬಂದ ಲೋಹಿತ್ ಮಲಗಿದ್ದ ಪುಷ್ಪಲತಾಳನ್ನು ತಲೆ ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿದ್ದಾನೆ. ಬಳಿಕ ಚಾಕುವಿನಿಂದ ಇರಿದು ಆಕೆಯ ಕೊರಳಲ್ಲಿದ್ದ ಮಾಂಗಲ್ಯ ಸರ, ಕಿವಿಯೋಲೆ ಕಿತ್ತುಕೊಂಡು ಹೋಗಿದ್ದ. ಇತ್ತ ಭವ್ಯಾ ಬಟ್ಟೆ ಹರಿದುಕೊಂಡು ಮೂರ್ಛೆ ಹೋದಂತೆ ನಾಟಕವಾಡಿದ್ದಳು. ಮನೆಯಲ್ಲೇ ಇದ್ದ ಅಜ್ಜಿ ನಾಗಮ್ಮ ಕಿರುಚಿಕೊಂಡು ಮನೆಯ ಹೊರಗೆ ಬಂದು ಮನೆಗೆ ಕಳ್ಳರು ಬಂದಿದ್ದಾರೆ ಎಂದು ಸ್ಥಳೀಯರನ್ನು ನಂಬಿಸಿದ್ದಾಗಿ ಮಾಹಿತಿ ನೀಡಿದ್ದಾರೆ.

ಪ್ರಕರಣ ಭೇದಿಸಿದ ಪೊಲೀಸರು:

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಭವ್ಯಾ, ಲೋಹಿತ್ ಕುಮಾರ್‌ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಕೊಲೆ ಪ್ರಕರಣದಲ್ಲಿ ಗಂಡ ಭರತ್ ಮತ್ತು ಮಾವ ನರಸಿಂಹಮೂರ್ತಿಯ ಪಾತ್ರ ಇಲ್ಲ. ಅತ್ತೆ ವಿಜಯಲಕ್ಷ್ಮೀಯನ್ನು ವಿಚಾರಣೆ ಮಾಡುತ್ತಿರುವ ಪೊಲೀಸರು ವಶಕ್ಕೆ ತೆಗೆದುಕೊಳ್ಳಲಿದ್ದಾರೆ. ಪ್ರಕರಣ ಭೇದಿಸಿದ ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಶ್ಲಾಘಿಸಿದ್ದಾರೆ.

ಸ್ಥಳ ಪರಿಶೀಲನೆ, ಪುಷ್ಪಲತಾ ಅವರ ಪೋಷಕರ ಹೇಳಿಕೆ ಮತ್ತು ಶವ ಪರೀಕ್ಷೆಯಿಂದ ಇದು ದರೋಡೆ ಕೃತ್ಯ ಅಲ್ಲ ಎಂಬ ಸಂಶಯ ಬಂದಿದೆ. ಶವದ ಕುತ್ತಿಗೆಗೆ ಅಳವಾಗಿ ಇರಿದಿರಲಿಲ್ಲ, ಹೆಚ್ಚಿನ ರಕ್ತಸ್ರಾವವೂ ಆಗಿರಲಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬ ವರದಿ ಬಂದಿತ್ತು.

ಮನೆ ಪರೀಕ್ಷೆ ಮಾಡಿದಾಗ ಆರೋಪಿಗಳು ಬಾಗಿಲು ಒಡೆಯುವ ಪ್ರಯತ್ನವೇ ಮಾಡಿರಲಿಲ್ಲ. ನೇರವಾಗಿ ಮನೆಗೆ ಬಂದಿದ್ದರು. ವಿಚಾರಣೆಯಲ್ಲಿ ಲೋಹಿತ್ ಕುಮಾರ್ ಬರುತ್ತಾನೆಂದೇ ಭವ್ಯಾ ಬಾಗಿಲು ತೆಗೆದು ಮಲಗಿದ್ದಳು. ಈ ಸಂಶಯಗಳ ಮೇಲೆ ವಿಚಾರಣೆ ಆರಂಭಿಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿದ್ದಾರೆ” ಎಂದು ವಿವರ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments