ಕಲಬುರಗಿ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆ ಕಲಬುರಗಿಯ ಕೇಂದ್ರ ಕಾರಾಗ್ರಹದಿಂದ ಮೂವರು ಕೈದಿಗಳು ರಾತ್ರೋರಾತ್ರಿ ಎಸ್ಕೇಪ್ ಆಗಿರುವ ಘಟನೆ ನಡೆದಿದೆ.
ಬೀದರ್ ಮೂಲದ ಕೈದಿಗಳಾದ ಸಂತೋಷ ಬಸವಕಲ್ಯಾಣ, ಸಾಗರ, ಮಷಾಕ್ ಎನ್ನುವ ಮೂವರು ಪರಾರಿಯಾಗಿದ್ದಾರೆ. ಪರಾರಿಯಾಗಿರುವ ಮೂವರೂ ಕೈದಿಗಳು ಬೀದರ ಮೂಲದವರು. ಪರಾರಿ ಘಟನೆ ಬೆನ್ನಲ್ಲೇ ಜೈಲಾಧಿಕಾರಿಯನ್ನು ಕೂಡಲೇ ಅಮಾನತು ಮಾಡಲಾಗಿದೆ.
ಮೂವರೂ ಸಹ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದವರು.ಎಲ್ಲರೂ ಮಲಗಿದ್ದ ವೇಳೆ ನಸುಕಿನ ಜಾವ ಗೋಡೆ ಹಾರಿ ಜೈಲಿನಿಂದ ಪರಾರಿಯಾಗಿದ್ದಾರೆ. ಪರತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಎಸ್ಕೆಪ್ ಆದ ಕೈದಿಗಳ ಹುಡುಕಾಟದಲ್ಲಿ ಪೊಲೀಸ್ ರು ತೊಡಗಿದ್ದಾರೆ.
ಕೈದಿಗಳ ಪರಾರಿಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಕಲಬುರಗಿ ನಗರ ಪೋಲಿಸ್ ಕಮೀಷನರ್ ಡಾ. ಶರಣಪ್ಪ ಅವರು ಕೇಂದ್ರ ಕಾರಾಗ್ರಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೈಲಿನ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ.
ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿ ಗಳಿಂದ ಇಂಚಿಂಚು ಮಾಹಿತಿ ಪಡೆದ ಪೊಲೀಸ್ ಕಮಿಷನರ್, ಕೈದಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
ಕೇಂದ್ರ ಕಾರಾಗೃಹದಿಂದ ಮೂವರು ಸಜಾ ಕೈದಿಗಳ ಪರಾರಿ ಪ್ರಕರಣದ ಬಗ್ಗೆ ಶಿವಸೇನಾ ಪಕ್ಷದ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಕಿಡಿಕಾರಿದ್ದಾರೆ
ರಾಜ್ಯ ಸರ್ಕಾರ ತನ್ನ ಮಾನ ಮರ್ಯಾದೆ ಉಳಿಸಿಕೊಳ್ಳಬೇಕಾದ್ರೆ ಗೃಹ ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದಿದ್ದಾರೆ.
ಖರ್ಗೆಯವರು ಬರಿ ಉಢಾಫೆ ಮಾತನಾಡುತ್ತಾರೆ.ಆದರೆ ಕಾನೂನು ಸುವ್ಯವಸ್ಥೆ ಬಗ್ಗೆ ಮಾತಾಡಲ್ಲ.ಇವರ ನಿರ್ಲಕ್ಷ್ಯದಿಂದ ಪೋಲಿಸ್ ಇಲಾಖೆ ಹಳ್ಳ ಹಿಡಿದಿದೆ.ಈ ಘಟನೆಯಿಂದ ಖರ್ಗೆಯವರ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ.ದೊಡ್ಡದಾದ ಗೋಡೆ ಹಾರಿ ಹೋಗಿರೋದು ಅತ್ಯಂತ ನಾಚಿಕೆಗೇಡಿತನ ಸಂಗತಿ. ಪ್ರಿಯಾಂಕ್ ಖರ್ಗೆಯವರು ಗೃಹ ಸಚಿವರಾದ ಮೇಲೆಯೇ ಪೋಲಿಸ್ ಇಲಾಖೆಯಲ್ಲಿ ಇಂತಹ ಘಟನೆಗಳು ಆಗ್ತಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿದ್ಧಲಿಂಗ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.



