ಬೆಂಗಳೂರು, ಜೂ.13: ರೈತರ ಅವಶ್ಯಕತೆಗೆ ಅನುಗುಣವಾಗಿ ರಾಜ್ಯಗಳಿಗೆ ರಸಗೊಬ್ಬರ ಪೂರೈಸಬೇಕಾದ್ದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯಕ್ಕೆ ಬೇಡಿಕೆಗೆ ಪ್ರತಿಯಾಗಿ ಕೇವಲ 30ರಷ್ಟು ಮಾತ್ರ ರಸಗೊಬ್ಬರ ಪೂರೈಸಿದ್ದು, ಇದರಿಂದ ರಾಜ್ಯದಲ್ಲಿ ರಸಗೊಬ್ಬರದ ತೀವ್ರ ಕೊರತೆ ಉದ್ಭವಿಸಿದೆ ಎಂದರು.
ಕೇಂದ್ರ ಸರ್ಕಾರ ತಾರತಮ್ಯ ಮಾಡದೆ ಕರ್ನಾಟಕ ರಾಜ್ಯದ ರೈತರ ಹಿತಕಾಯಲು ಪೂರ್ಣ ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆ ಮಾಡುವಂತೆ ಅವರು ಒತ್ತಾಯಿಸಿದರು.
ಬೀದರ್ ಜಿಲ್ಲೆಯಲ್ಲಿ ರಸಗೊಬ್ಬರವನ್ನು ಹೆಚ್ಚಿನ ದರಕ್ಕೆ ಮತ್ತು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಮತ್ತು ಅಂತಹ ಮಳಿಗೆಗೆಳ ಮೇಲೆ ದಾಳಿ ಮಾಡಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವುದಾಗಿಯೂ ಈಶ್ವರ ಖಂಡ್ರೆ ತಿಳಿಸಿದರು.



