Friday, July 17, 2026
Google search engine
Homeರಾಜ್ಯಬಿಪಿಎಲ್ ಕಾರ್ಡ್ ಆದಾಯ ಮಿತಿ ಶ್ರೀಘ್ರ ಹೆಚ್ಚಳ: ಸಚಿವ ಕೆಎಚ್ ಮುನಿಯಪ್ಪ

ಬಿಪಿಎಲ್ ಕಾರ್ಡ್ ಆದಾಯ ಮಿತಿ ಶ್ರೀಘ್ರ ಹೆಚ್ಚಳ: ಸಚಿವ ಕೆಎಚ್ ಮುನಿಯಪ್ಪ

ಬೆಂಗಳೂರು: ಆದಷ್ಟು ಬೇಗ ಬಿಪಿಎಲ್ ಕಾರ್ಡ್​ಗಾಗಿನ ಆದಾಯ ಮಿತಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು‌. ಆರ್.ವಿ‌. ದೇಶಪಾಂಡೆ ಅಧ್ಯಕ್ಷತೆಯ ಆಡಳಿತ ಸುಧಾರಣಾ ಆಯೋಗ ಈ ಬಗ್ಗೆ ಶಿಫಾರಸು ಮಾಡಿದೆ. ಆದಾಯ ಮಿತಿ ಹೆಚ್ಚಿಸುವಂತೆ ಬೇಡಿಕೆ ಇದೆ.‌ ಈ ಬಗ್ಗೆ ಆದಷ್ಟು ಬೇಗ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಡು ಬಡತನ ರೇಖೆ (ಬಿಪಿಎಲ್​​) ಯಲ್ಲಿರುವ ಹಲವು ಮಂದಿ ಅನರ್ಹರನ್ನು ಆದಷ್ಟು ಬೇಗ ಎಪಿಎಲ್​ಗೆ ಸೇರಿಸಿ ಪರಿಷ್ಕರಣೆ ಮಾಡಲಾಗುವುದು ಎಂದರು.

ಬಿಪಿಎಲ್​ನಿಂದ ಎಪಿಎಲ್​ಗೆ ಪರಿವರ್ತನೆ ಆಗುವಂತೆ ಹಲವು ಬಾರಿ ಮನವಿ ಮಾಡಿದ್ದೇನೆ. ಕೇಂದ್ರ ಸರ್ಕಾರ 7.76 ಲಕ್ಷ ಅನುಮಾನಾಸ್ಪದ ಅನರ್ಹ ಬಿಪಿಎಲ್ ಕಾರ್ಡುಗಳ ಗುರುತು ಮಾಡಿದೆ. ಅದರ ಪರಿಷ್ಕರಣೆ ನಡೆಯುತ್ತಿದ್ದು, ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ಈ ಪೈಕಿ ಈಗಾಗಲೇ ಸುಮಾರು ಶೇ.50ರಷ್ಟು ಪರಿಷ್ಕರಣೆ ಮಾಡಲಾಗಿದೆ. ಸುಮಾರು 4,32,295 ಬಿಪಿಎಲ್​ನಲ್ಲಿ ಇದ್ದವರನ್ನು ಎಪಿಎಲ್​ಗೆ ಪರಿವರ್ತನೆ ಮಾಡಲಾಗಿದೆ. ಉಳಿದವರನ್ನು ಆದಷ್ಟು ಬೇಗ ಎಪಿಎಲ್ ಗೆ ಪರಿವರ್ತನೆ ಮಾಡಲಾಗುವುದು ಎಂದು ಅವರು ಹೇಳಿದರು.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರ್ಕಾರದ 1,08,95,138 ಎಎವೈ, ಪಿಹೆಚ್​ಹೆಚ್​ ಪಡಿತರ ಚೀಟಿಗಳ ಮೂಲಕ 4,02,03,247 ಫಲಾನುಭವಿಗಳು ಹಾಗೂ ರಾಜ್ಯ ಸರ್ಕಾರದ 16,13,266 ಪಿಹೆಚ್ ಹೆಚ್ ಪಡಿತರ ಚೀಟಿಗಳ ಮೂಲಕ 43,48,046 ಫಲಾನುಭವಿಗಳು ಸೇರಿ ಒಟ್ಟಾರೆ 1,25,08,404 ಎಎವೈ/ಪಿಹೆಚ್ ಹೆಚ್ ಪಡಿತರ ಚೀಟಿಗಳ ಮೂಲಕ 4,45,51,293 ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಶೇ.65.69 ಜನಸಂಖ್ಯೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ವ್ಯಾಪ್ತಿಗೆ ಒಳಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಆದಾಯ ಮಿತಿ ಹೆಚ್ಚಳಕ್ಕೆ ಕ್ರಮ:

ಬಿಪಿಎಲ್ ಕಾರ್ಡ್​ಗೆ ಆದಾಯ ಮಿತಿ ಹೆಚ್ಚಳ ವಿಚಾರವಾಗಿ ಮಾತನಾಡಿ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಗ್ಯಾರಂಟಿ ಯೋಜನೆಯಡಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ದೊರೆಯುವ 5 ಕೆ.ಜಿ. ಆಹಾರಧಾನ್ಯದ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ. 2023ರಲ್ಲಿ ಕೇಂದ್ರ ಸರ್ಕಾರದಿಂದ ಹೆಚ್ಚುವರಿ ಅಕ್ಕಿ ಲಭ್ಯವಾಗದ ಹಿನ್ನೆಲೆಯಲ್ಲಿ ಜುಲೈ 2023ರಿಂದ ಡಿಸೆಂಬರ್ 2024ರವರೆಗೆ 72.02 ಕೋಟಿ ಫಲಾನುಭವಿಗಳಿಗೆ ಒಟ್ಟು 11,561 ಕೋಟಿ ಮೊತ್ತವನ್ನು ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡಲಾಗಿದೆ ಎಂದು ಸಚಿವರು ಇದೇ ವೇಳೆ ವಿವರಿಸಿದರು.

2.10 ಲಕ್ಷ ಮೆಟ್ರಿಕ್ ಟನ್ ಖರೀದಿ:

ಫೆಬ್ರುವರಿ 2025 ರಿಂದ 4,44,67,942 ಫಲಾನುಭವಿಗಳಿಗೆ ಪ್ರತಿ ತಿಂಗಳು ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿಯನ್ನು ನೇರವಾಗಿ ವಿತರಿಸಲಾಗುತ್ತಿದೆ. ಇದಕ್ಕಾಗಿ ಪ್ರತಿ ತಿಂಗಳು ಸುಮಾರು 2.10 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಎಫ್‌ಸಿಐನ ಯೋಜನೆಯಡಿ ಖರೀದಿಸಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಆರೋಗ್ಯ ಸಂಬಂಧಿತ ಕಾರಣಕ್ಕೆ ಕೂಡಲೇ ಬಿಪಿಎಲ್ ಕಾರ್ಡ್ ನೀಡಲು ಸೂಚನೆ ನೀಡಲಾಗಿದೆ. 15 ದಿನಗಳಲ್ಲಿ ಕಾರ್ಡ್ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.‌

ಸ್ಮಾರ್ಟ್ ಪಿಡಿಎಸ್‌ ಸುಧಾರಣೆ:

ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕ ಹಾಗೂ ಪರಿಣಾಮಕಾರಿಯಾಗಿಸಲು ಸ್ಮಾರ್ಟ್ ಪಿಡಿಎಸ್ ಯೋಜನೆ ಜಾರಿಗೊಳಿಸಲಾಗುತ್ತಿದೆ. ಆದಷ್ಟು ಬೇಗ ಯೋಜನೆ ಜಾರಿಗೊಳಿಸಲಾಗುವುದು. ಇದರಡಿ ಇ-ಪಾಸ್ ಯಂತ್ರಗಳು ಹಾಗೂ ಎಲೆಕ್ಟ್ರಾನಿಕ್ ತೂಕ ಯಂತ್ರಗಳ ಅಳವಡಿಕೆಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಯೋಜನೆಯಿಂದ ಫಲಾನುಭವಿಗಳಿಗೆ ವೇಗದ, ನಿಖರ ಹಾಗೂ ವಿಶ್ವಾಸಾರ್ಹ ಸೇವೆ ದೊರೆಯಲಿದೆ ಎಂದು ಇದೇ ವೇಳೆ ತಿಳಿಸಿದರು.

ಕನಿಷ್ಠ ಬೆಂಬಲ ಬೆಲೆ ಖರೀದಿ:

2025-26ನೇ ಸಾಲಿನಲ್ಲಿ 5.69 ಲಕ್ಷ ಮೆಟ್ರಿಕ್ ಟನ್ ರಾಗಿ, 2.21 ಲಕ್ಷ ಮೆಟ್ರಿಕ್ ಟನ್ ಜೋಳ ಹಾಗೂ 0.0567 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಲಾಗಿದೆ. ಈ ಯೋಜನೆಯ ಒಟ್ಟು ಮೊತ್ತ ರೂ. 4,422.17 ಕೋಟಿ. ಇದರಿಂದ 2,89,350 ರೈತರಿಗೆ ನ್ಯಾಯಯತ ಬೆಲೆ ದೊರೆತಿದೆ.

2026-27ರಲ್ಲಿ ಪ್ರತಿ ಕ್ವಿಂಟಾಲ್‌ ರಾಗಿಗೆ 5,205 ರೂ. ಕನಿಷ್ಠ ಬೆಂಬಲ ಬೆಲೆ, ಜೋಳಕ್ಕೆ 4,023 ರೂ., ಭತ್ತಕ್ಕೆ 2,461 ರೂ. ಕನಿಷ್ಠ ಬೆಂಬಲ ಬೆಲೆ ನೀಡಲಾಗುತ್ತಿದೆ. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಿರುವ ₹1,902.58 ಕೋಟಿ ಕನಿಷ್ಠ ಬೆಂಬಲ ಬೆಲೆ ಮರುಪಾವತಿಯನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ. ಅದರ ಫಲವಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ 190.10 ಕೋಟಿ ಬಿಡುಗಡೆಯಾಗಿದೆ ಎಂದರು.

ಕಾಳಸಂತೆ ತಡೆಗೆ ಕ್ರಮ:

ಪಡಿತರ ಆಹಾರಧಾನ್ಯಗಳ ಅಕ್ರಮ ಸಾಗಾಣಿಕೆ ಹಾಗೂ ಕಾಳಸಂತೆ ತಡೆಗಟ್ಟಲು ಇಲಾಖೆಯು ಕಟ್ಟುನಿಟ್ಟಿನ ಜಾರಿ ಕ್ರಮಗಳನ್ನು ಕೈಗೊಂಡಿದೆ. ಕಳೆದ ಮೂರು ವರ್ಷಗಳಲ್ಲಿ 1,497 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, ₹49.38 ಕೋಟಿ ಮೌಲ್ಯದ 2,86,181 ಕ್ವಿಂಟಾಲ್ ಆಹಾರಧಾನ್ಯ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಇಲಾಖೆಯು 2023-24ರಲ್ಲಿ ₹83.19 ಕೋಟಿ, 2025-26ರಲ್ಲಿ ₹90.09 ಕೋಟಿ ರಾಜಸ್ವ ಸಂಗ್ರಹಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 17.67 ಕೋಟಿ ರಾಜಸ್ವ ಸಂಗ್ರಹ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments