ಮೈಸೂರು: ಪ್ರಧಾನಿ ಮೋದಿ ನೇತೃತ್ವದ ಸರ್ಕಾರ 11 ವರ್ಷ ಪೂರೈಸಿದ್ದೇ ದೊಡ್ಡ ಸಾಧನೆ. ಅವರು ಹೇಳಿದ್ದು ಯಾವುದೂ ಮಾಡಿಲ್ಲ. ಹಾಗಾಗಿ ಅವರ ಸರ್ಕಾರಕ್ಕೆ ಸೊನ್ನೆ ಅಂಕ ನೀಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅಧಿಕಾರಕ್ಎ ಬಂದ ನಂತರ ಏನು ಮಾಡುತ್ತೇನೆ ಎಂದು ಹೇಳಿದ್ದರೋ ಅದು ಯಾವೂದೂ ಮಾಡಿಲ್ಲ. ಕೇವಲ ಸುಳ್ಳು ಪ್ರಚಾರದ ಮೂಲಕ ಅಧಿಕಾರದಲ್ಲಿ ಇದ್ದಾರೆ ಅಷ್ಟೆ ಎಂದರು.
ಮೋದಿ ಪ್ರಚಾರದಿಂದ ಬದುಕಿರುವುದು.
ಮೋದಿ ಅವರು ಪ್ರಚಾರದಿಂದ ಬದುಕಿರುವುದು. ನೋಟು ಅಮಾನ್ಯೀಕರಣದಿಂದ ಯಾರಿಗೆ ಅನುಕೂಲವಾಗಿದೆ? ಅಚ್ಚೆ ದಿನ್ ಆಯೇಗಾ, ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಕೊಡುತ್ತೇನೆ ಎಂದರು. ರೈತರ ಸಮಸ್ಯೆ ಬಗೆಹರಿಸುತ್ತೇನೆ ಎಂದರು. ರೈತರು ಒಂದು ವರ್ಷ ಕಾಲ ಚಳುವಳಿಯನ್ನು ಏಕೆ ಮಾಡಿದರು ಎಂದು ಪ್ರಶ್ನಿಸಿದರು.
ಸುಳ್ಳು ವಿಚಾರಗಳಿಗೆ ಪ್ರಚಾರ
ಮಾಧ್ಯಮಗಳು ಅವರಿಗೆ ಹೆಚ್ಚಿನ ಪ್ರಚಾರ ನೀಡುತ್ತಿವೆ. ಜೊತೆಗೆ ಸುಳ್ಳುಗಳನ್ನು ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆ ಗಳನ್ನು ಘೋಷಣೆ ಮಾಡಿದಾಗ ಇದನ್ನು ಅನುಷ್ಠಾನ ಮಾಡಲಾಗುವುದಿಲ್ಲ, ರಾಜ್ಯ ಸರ್ಕಾರ ದಿವಾಳಿಯಾಗುತ್ತದೆ ಎಂದವರು ಅದನ್ನೇ ನಕಲು ಮಾಡಿದರು ಎಂದು ಅವರು ಹೇಳಿದರು.
ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿಯಲ್ಲಿ ಅದನ್ನೇ ಜಾರಿ ಮಾಡಿದರು. ಗುಜರಾತ್ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಶೇ.50ರಷ್ಟು ತೆರಿಗೆ ಹಂಚಿಕೆ ಮಾಡಿದರು. ಇವರೇ ಪ್ರಧಾನಿಗಳಾದಾಗ ಏನು ಮಾಡಿದರು? ಎಂದು ಪ್ರಶ್ನಿಸಿದರು.
ನಿರ್ಮಲಾ ಸೀತಾರಾಮನ್ 5300 ಕೋಟಿಗಳನ್ನು ಕೊಡುವುದಾಗಿ ಘೋಷಿಸಿ ಕೊಡಲಿಲ್ಲ. 15ನೇ ಹಣಕಾಸು ಆಯೋಗದವರು 11495 ಕೋಟಿ ಕೊಡಬೇಕು ಎಂದು ಶಿಫಾರಸ್ಸು ಮಾಡಿದರೂ ಕೊಡಲಿಲ್ಲ. ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಬಿಜೆಪಿ ಪ್ರಶ್ನೆ ಮಾಡುವುದನ್ನು ಬಿಟ್ಟು ಅಪಪ್ರಚಾರ ಮಾಡುತ್ತಿದೆ ಎಂದರು.



