ಗರ್ಭಿಣಿಯರಿಗೆ 21 ಸಾವಿರ ರೂ. ನೆರವು, ಮೊದಲ ಮಗುವಿಗೆ 5000 ರೂ. 2ನೇ ಮಗುವಿಗೆ 6000 ರೂ. ನೆರವು ಅಲ್ಲದೇ ಹಿರಿಯ ಮಹಿಳೆಯರಿಗೆ ಮಾಸಿಕ 2000ದಿಂದ 3000 ರೂ.ವರೆಗೂ ನೆರವು ಘೋಷಿಸುವ ಮೂಲಕ ಬಿಜೆಪಿ ದೆಹಲಿ ಚುನಾವಣೆಯಲ್ಲಿ ಮಹಿಳಾ ಮತದಾರರ ಮೇಲೆ ಸ್ಪಷ್ಟ ಕಣ್ಣಿಟ್ಟಿದೆ.
ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಚುನಾವಣಾ ಪ್ರಣಾಳಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, ಮಹಿಳಾ ಮತದಾರರನ್ನು ಸೆಳೆಯಲು ಭರಪೂರ ಘೋಷಣೆಗಳನ್ನು ಮಾಡಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ ಮೊದಲ ಸಂಪುಟ ಸಭೆಯಲ್ಲಿಯೇ ಆಯುಷ್ಮಾನ್ ಭಾರತ್ ಯೋಜನೆ ಜಾರಿ ಮಾಡಲಿದೆ. ಈ ಮೂಲಕ ಆಮ್ ಆದ್ಮಿ ವಿರೋಧಿಸಿದ್ದ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತರುವುದಾಗಿ ಹೇಳಿದೆ.
5 ರೂ.ಗೆ ಊಟ, ಉಪಹಾರ ನೀಡುವ ಅಟಲ್ ಕ್ಯಾಂಟಿನ್ ಅನ್ನು ಪ್ರತಿಯೊಂದು ಕೊಳಗೇರಿ ಪ್ರದೇಶದಲ್ಲಿ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಲಾಗಿದೆ.
ಗರ್ಭಿಣಿ ಮಹಿಳೆಯರಿಗೆ 6 ಪೋಷಕಾಂಶಗಳ ಕಿಟ್ ಜೊತೆಗೆ 21,000 ರೂ. ನೆರವು ಘೋಷಿಸಿದೆ. ಅಲ್ಲದೇ ಮೊದಲ ಮಗುವಿಗೆ ಜನ್ಮ ನೀಡಿದರೆ 5000 ರೂ. ಹಾಗೂ ಎರಡನೇ ಮಗುವಿಗೆ 6000 ರೂ. ನೀಡುವುದಾಗಿ ಹೇಳಿಕೊಂಡಿದೆ.
60ರಿಂದ 70 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಾಸಿಕ 2000ದಿಂದ 2500 ರೂ. ಹಾಗೂ 70 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಾಸಿಕ 3000 ರೂ.ನೀಡುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿದೆ.