ಹಾಲಿ ಡೇ ಪ್ಲಾನ್ ಹೆಸರಲ್ಲಿ ನಕಲಿ ಕಾಲ್ ಸೆಂಟರ್ ಮೂಲಕ ಜನರನ್ನು ಲೂಟಿ ಮಾಡುತ್ತಿದ್ದ ಗ್ಯಾಂಗ್ ಅನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ.
ನೋಯ್ದಾದ ಸೆಂಟರ್ 63ಯಲ್ಲಿ ಕಂಟ್ರಿ ಹಾಲಿಡೇ ಟ್ರಾವೆಲ್ ಇಂಡಿಯಾ ಲಿಮಿಟೆಡ್ ಹೆಸರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಕಲಿ ಕಾಲ್ ಸೆಂಟರ್ ನಡೆಸುತ್ತಿದ್ದ 17 ಮಹಿಳೆಯರು ಸೇರಿ 32 ಜನರ ಬೃಹತ್ ಗುಂಪನ್ನು ಪೊಲೀಸರು ಬಂಧಿಸಿದ್ದಾರೆ.
ಗ್ರಾಹಕರಿಗೆ ಕರೆ ಮಾಡಿ ಕಡಿಮೆ ದರದಲ್ಲಿ ರಜಾ ದಿನದ ಪ್ರವಾಸ ರೂಪಿಸುವುದಾಗಿ ಹೇಳಿಕೊಳ್ಳುತ್ತಿದ್ದರು. ಬಹುತೇಕ ಮಹಿಳೆಯರೇ ಕರೆ ಮಾಡಿ ಲಕ್ಷಾಂತರ ರೂಪಾಯಿ ಹಣ ಪಡೆದು ಪ್ರವಾಸ ಆಯೋಜಿಸದೇ ವಂಚಿಸುತ್ತಿದ್ದರು. ಕಾಲ್ ಸೆಂಟರ್ ನಲ್ಲಿದ್ದ ಲ್ಯಾಪ್ ಟಾಪ್, ಯುಪಿಎಸ್, ಮೊಬೈಲ್, ಐಪ್ಯಾಡ್ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಗ್ಯಾಂಗ್ ಕಳೆದ 2 ವರ್ಷದಲ್ಲಿ ನೂರಾರು ಜನರನ್ನು ವಂಚಿಸಿದ್ದು, ಶಕ್ತಿ ಮೋಹನ್ ಅವಾಸ್ತಿ ಎಂಬುವರಿಗೆ 7 ದಿನಗಳ ಐಷಾರಾಮಿ ಪ್ರವಾಸದ ಯೋಜನೆ ನೀಡುವುದಾಗಿ 2.5 ಲಕ್ಷ ರೂ. ವಂಚಿಸಿತ್ತು. ಹಣ ಪಡೆದ ನಂತರ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡದೇ ವಂಚಿಸಿತ್ತು.
ಇದೇ ರೀತಿ ಅನಿತಾ ಎಂಬಾಕೆಗೆ 84 ಸಾವಿರ ರೂ.ಗೆ ಐಟಿಸಿ ಹೋಟೆಲ್ ಸೇರಿದಂತೆ ಐಷಾರಾಮಿ 7 ದಿನದ ಪ್ರವಾಸ ಯೋಜನೆ ನೀಡುವುದಾಗಿ ವಂಚಿಸಿತ್ತು. ಹೋಟೆಲ್ ಬುಕ್ ಮಾಡದ ಕಾರಣ ಅನಿತಾ ಪೊಲೀಸರಿಗೆ ದೂರು ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿತು.