ಕಾಂಗ್ರೆಸ್ ಪಕ್ಷ ನೂತನವಾಗಿ ನಿರ್ಮಿಸಲಾದ ಇಂದಿರಾ ಗಾಂಧಿ ಭವನ್ ಕಟ್ಟಡದಲ್ಲಿ ಪ್ರಧಾನ ಕಚೇರಿ ಸ್ಥಳಾಂತರಿಸಲಿದೆ.
ಜನವರಿ 15ರಂದು ಬೆಳಿಗ್ಗೆ 10 ಗಂಟೆಗೆ ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಉದ್ಘಾಟಿಸಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ದೇಶದ 400ಕ್ಕೂ ಹೆಚ್ಚು ಪ್ರಮುಖ ಪಕ್ಷದ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ದೆಹಲಿಯ ಅಕ್ಬರ್ ರಸ್ತೆ 24ರಲ್ಲಿ ಕಳೆದ 50ಕ್ಕೂ ವರ್ಷಗಳ ಕಾಲ ಪ್ರಧಾನ ಕಚೇರಿ ಹೊಂದಿದ್ದ ಕಾಂಗ್ರೆಸ್ ಇದೀಗ ಮೊದಲ ಬಾರಿ ಕೋಟ್ಲಾ ರಸ್ತೆ 9ಎಗೆ ಸ್ಥಳಾಂತರಗೊಳ್ಳುತ್ತಿದೆ. ಪ್ರಧಾನ ಕಚೇರಿಗೆ ದೇಶದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಹೆಸರಿಡುವ ಮೂಲಕ ಕಾಂಗ್ರೆಸ್ ಮಹಿಳಾ ಪ್ರಾಧಾನ್ಯತೆ ನಿಯಮ ಮುಂದುವರಿಸುವ ಸುಳಿವು ನೀಡಿದೆ.
2009ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೂತನ ಕಚೇರಿಯ ಕಟ್ಟಡದ ಶಂಕುಸ್ಥಾಪನೆ ಮಾಡಿದ್ದು, ಸುಮಾರು 15 ವರ್ಷಗಳ ಸುದೀರ್ಘ ಸಮಯದ ನಂತರ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ಆಧುನಿಕ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ಕಟ್ಟಡದಲ್ಲಿ ಆಡಳಿತ, ಪಕ್ಷದ ತಂತ್ರಗಾರಿಕೆ ಸೇರಿದಂತೆ ಪ್ರಮುಖ ಚಟುವಟಿಕೆಗಳಿಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ.