ಸ್ಮಾರ್ಟ್ ಸಿಟಿ ಹೆಸರಿನಲ್ಲಿ 70 ಸಾವಿರ ಜನರಿಂದ 2576 ಕೋಟಿ ರೂ ವಂಚಿಸಿದ ರಾಜಸ್ಥಾನದ ಸೋದರರನ್ನು ಬಂಧಿಸಲಾಗಿದೆ.
ಸಿಕಾರ್ ಜಿಲ್ಲೆಯ ಸೋದರರಾದ ಸುಭಾಷ್ ಬಿಜಾರಾಣಿ ಮತ್ತು ರಣವೀರ್ ಬಿಜಾರಾಣಿ ಅವರನ್ನು ಬಂಧಿಸಲಾಗಿದೆ.
ನೆಕ್ಸಾ ಎವರಗ್ರೀನ್ ಕಂಪನಿ ಹೆಸರಿನಲ್ಲಿ ಗುಜರಾತ್ ನಲ್ಲಿ ಧೋಲೇರಾ ಸ್ಮಾರ್ಟ್ ಸಿಟಿ ಆರಂಭಿಸಲಿದ್ದು, ಇದರಲ್ಲಿ ಬಂಡವಾಳ ಹೂಡಿದರೆ ದೊಡ್ಡ ಮೊತ್ತದ ಬಡ್ಡಿ ಜಾಗ ನೀಡುವುದಾಗಿ ಆಮೀಷವೊಡ್ಡಿದ ಸೋದರರು 2676 ಕೋಟಿ ರೂ. ಸಂಗ್ರಹಿಸಿ ವಂಚಿಸಿದ್ದಾರೆ.
ಬಂಧಿತ ಆರೋಪಿ ರಣವೀರ್ ಬಿಜಾರಾಣಿ 2014ರಲ್ಲಿ ಗುಜರಾತ್‌ನ ಧೋಲೇರಾದಲ್ಲಿ ಭೂಮಿ ಖರೀದಿಸಿದ್ದ. ಸುಭಾಷ್ 30 ಲಕ್ಷ ರೂ. ಕೊಟ್ಟು ಭೂಮಿ ಖರೀದಿಸಿದ್ದ. ನಂತರ ಇಬ್ಬರೂ ಸೇರಿ 2021 ರಲ್ಲಿ ನೆಕ್ಸಾ ಎವರ್‌ಗ್ರೀನ್ ಕಂಪನಿಯನ್ನು ಅಹಮದಾಬಾದ್‌ನಲ್ಲಿ ನೋಂದಾಯಿಸಿಕೊಂಡಿದ್ದರು.
ಕಂಪನಿಯು ಧೋಲೇರಾ ಸ್ಮಾರ್ಟ್ ಸಿಟಿಯ ಭಾಗ ಎಂದು ಹೇಳಿಕೊಂಡು, ಹೆಚ್ಚಿನ ಲಾಭ ಮತ್ತು ಭೂಮಿ ನೀಡುವ ಆಮಿಷವೊಡ್ಡಿ ಹೂಡಿಕೆದಾರರನ್ನು ಸೆಳೆದಿದ್ದಾರೆ. ಧೋಲೇರಾ ಸ್ಮಾರ್ಟ್ ಸಿಟಿ ಯೋಜನೆಗಳ ಫೋಟೋಗಳನ್ನು ತೋರಿಸಿ ಹೆಚ್ಚು ಜನರನ್ನು ಸೆಳೆಯಲು ಗುಂಪಿಗೆ ಸೇರಿಸಿದವರಿಗೆ ಕಾರು, ಬೈಕ್ ಮುಂತಾದ ಬಹುಮಾನ ನೀಡುವುದಾಗಿ ಆಮಿಷವೊಡ್ಡಿ ವಂಚಿಸಿದ್ದಾರೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿಗಳು ಈ ಹಣದಲ್ಲಿ ಐಷಾರಾಮಿ ಕಾರುಗಳು, ಗಣಿ, ರಾಜಸ್ಥಾನದಲ್ಲಿ ಹೋಟೆಲ್‌ಗಳು, ಅಹಮದಾಬಾದ್‌ನಲ್ಲಿ ಫ್ಲ್ಯಾಟ್‌ಗಳು ಮತ್ತು ಗೋವಾದಲ್ಲಿ 25 ರೆಸಾರ್ಟ್‌ಗಳನ್ನು ಖರೀದಿಸಿದ್ದರು. ವಂಚನೆ ಬೆಳಕಿಗೆ ಬರುತ್ತಿದ್ದಂತೆ ಎಲ್ಲ ಕಚೇರಿಗಳನ್ನು ಮುಚ್ಚಿ ಪರಾರಿಯಾಗಿದ್ದರು.
ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ಜಾರಿ ನಿರ್ದೇಶನಾಲಯ ಹಣ ವರ್ಗಾವಣೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
ಏನಿದು ಧೋಲೇರಾ ಸ್ಮಾರ್ಟ್ ಸಿಟಿ ಯೋಜನೆ?
ಧೋಲೇರಾ ಸ್ಮಾರ್ಟ್ ಸಿಟಿ ಯೋಜನೆಯು ಕೇಂದ್ರ ಮತ್ತು ಗುಜರಾತ್ ಸರ್ಕಾರದ ಜಂಟಿ ಯೋಜನೆಯಾಗಿದೆ. ದೇಶದ ಮೊದಲ ಹಸಿರು ಸ್ಮಾರ್ಟ್ ಸಿಟಿಯಾಗಿದ್ದು, ದೆಹಲಿಗಿಂತ 2 ಪಟ್ಟು (920 ಚದರ ಕಿ.ಮೀ) ದೊಡ್ಡದಾಗಿದೆ. ಇಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಕಚೇರಿ ಆರಂಭವಾಗಲಿದ್ದು, 2042ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಯೋಜನೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡ ಸೋದರರು ಸಂಗಡಿಗರ ಜೊತೆ ಸೇರಿ ಈ ಜಾಗದಲ್ಲಿ ಬಡವಾಣೆ ನಿರ್ಮಿಸುವ ಆಮೀಷವೊಡ್ಡಿ ವಂಚಿಸಿದ್ದರು.


