12ನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲೆಯ ಮುಖ್ಯೋಪಾಧ್ಯಯರನ್ನು ಶಾಲೆಯ ಶೌಚಾಲಯದಲ್ಲಿ ಗುಂಡಿಕ್ಕಿ ಕೊಲೆಗೈದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಛತ್ರಪುರ ಜಿಲ್ಲೆಯ ಧಾಮೋರ ಸರ್ಕಾರಿ ಸೆಕೆಂಡರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ 55 ವರ್ಷದ ಸುರೇಂದ್ರ ಕುಮಾರ್ ಸಕ್ಸೇನಾ ಹತ್ಯೆಯಾಗಿದ್ದು, ಶಾಲೆಯ ಶೌಚಾಲಯದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರಿಂದ ಅಲ್ಲಿಯೇ ಅವರನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಮುಖ್ಯೋಪಾಧ್ಯಾಯರನ್ನು ಹಿಂಬಾಲಿಸಿದ ವಿದ್ಯಾರ್ಥಿ ಶೌಚಾಲಯಕ್ಕೆ ಹೋಗುತ್ತಿದ್ದಂತೆ ಅವರ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಒಂದು ಗುಂಡು ಅವರ ಹಣೆಗೆ ಬಿದ್ದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗುಂಡಿನ ಶಬ್ಧ ಕೇಳುತ್ತಿದ್ದಂತೆ ಶಾಲೆ ಸಿಬ್ಬಂದಿ ಮುಖ್ಯೋಪಾಧ್ಯಾಯರ ಕೊಠಡಿಗೆ ಧಾವಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಕಂಡು ಗಾಬರಿಯಾಗಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಶಾಲೆಯ ಸಿಸಿಟಿವಿಯಲ್ಲಿ ಮುಖ್ಯೋಪಾಧ್ಯಾಯರನ್ನು ವಿದ್ಯಾರ್ಥಿ ಹಿಂಬಾಲಿಸಿದ ದೃಶ್ಯ ಪತ್ತೆಯಾಗಿದೆ.
ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಅಕ್ರಮ ಚಟುವಟಿಕೆಗಳನ್ನು ಮಾಡುತ್ತಿದ್ದು, ಮುಖ್ಯೋಪಾಧ್ಯಾಯರು ಎಚ್ಚರಿಕೆ ನೀಡಿದ್ದರು. ಇದರಿಂದ ಸೇಡಿನ ಕ್ರಮವಾಗಿ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಪೊಲೀಸ್ ಸೂಪರಿಟೆಂಡೆಂಟ್ ಶಂಕಿಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.