2021ರಲ್ಲಿ ಜಫ್ತಿ ಮಾಡಲಾದ 1000 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ ಪ್ರಕರಣದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಗೆ ಆದಾಯ ತೆರಿಗೆ ಇಲಾಖೆ ಕ್ಲೀನ್ ಚಿಟ್ ನೀಡಿದೆ.
ಅಜಿತ್ ಪವಾರ್ ಹಾಗೂ ಅವರ ಕುಟುಂಬ ಬೇನಾಮಿ ಆಸ್ತಿ ಹೊಂದಿದೆ ಎಂಬ ದೂರನ್ನು ಬೇನಾಮಿ ಆಸ್ತಿ ವಿವಾದ ಇತ್ಯರ್ಥ ಮಂಡಳಿ ವಜಾಗೊಳಿಸಿದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಕ್ಲೀನ್ ಚಿಟ್ ನೀಡಿದೆ.
ಅಜಿತ್ ಪವಾರ್ ಮಹಾರಾಷ್ಟ್ರ ನೂತನ ಸರ್ಕಾರದಲ್ಲಿ ಏಕನಾಥ್ ಶಿಂಧೆ ಜೊತೆ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಕ್ಲೀನ್ ಚಿಟ್ ನೀಡಿ ಜಫ್ತಿ ಮಾಡಿದ್ದ ಆಸ್ತಿಯನ್ನು ಮರಳಿಸಿದೆ.
ಮಹಾರಾಷ್ಟ್ರದಲ್ಲಿ ಎನ್ ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ನೇತೃತ್ವದ ಸರ್ಕಾರ ಇದ್ದಾಗ 2021, ಅಕ್ಟೋಬರ್ 7ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅಜಿತ್ ಪವಾರ್ ಹಾಗೂ ಅವರ ಕುಟುಂಬಕ್ಕೆ ಸೇರಿದ ಜಾಗಗಳ ಮೇಲೆ ದಾಳಿ ನಡೆಸಿ ಆಸ್ತಿಯನ್ನು ಜಫ್ತಿ ಮಾಡಿತ್ತು.
ಅಜಿತ್ ಪವಾರ್ ಕುಟುಂಬಕ್ಕೆ ಸೇರಿದ ಸತಾರದಲ್ಲಿರುವ ಸಕ್ಕರೆ ಕಾರ್ಖಾನೆ, ದೆಹಲಿಯಲ್ಲಿರುವ ಫ್ಲಾಟ್, ಗೋವಾದ ರೆಸಾರ್ಟ್ ಗಳ ಮೇಲೆ ಆದಾಯ ತೆರಿಗೆ ದಾಳಿ ಮಾಡಿತ್ತು.
ಆದಾಯ ತೆರಿಗೆ ಇಲಾಖೆ ಅಜಿತ್ ಪವಾರ್ ಬೇನಾಮಿ ಆಸ್ತಿ ಹೊಂದಿದ್ದಾರೆ ಎಂಬುದಕ್ಕೆ ಯಾವುದೇ ಪೂರಕ ಸಾಕ್ಷ್ಯ ಒದಗಿಸಿಲ್ಲ ಎಂದು ಹೇಳಿದ ನ್ಯಾಯಮಂಡಳಿ ಸಾಕ್ಷ್ಯಗಳ ಕೊರತೆ ಆಧಾರದ ಮೇಲೆ ಆರೋಪ ವಜಾಗೊಳಿಸಿತ್ತು.