ಫೆಬ್ರವರಿ 5ರಂದು ಒಂದೇ ಹಂತದಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.
ದೆಹಲಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ಒಂದೇ ಹಂತದಲ್ಲಿ 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಸುವುದಾಗಿ ಘೋಷಿಸಿದರು.
ಫೆಬ್ರವರಿ 5ರಂದು ಮತದಾನ ನಡೆಯಲಿದ್ದು, ಫೆಬ್ರವರಿ 8ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ ನೀತಿ ಸಂಹಿತೆ ಇಂದಿನಿಂದಲೇ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದರು.
ದೆಹಲಿ ವಿಧಾನಸಭೆ ಅವಧಿ ಫೆಬ್ರವರಿ 15ಕ್ಕೆ ಮುಕ್ತಾಯವಾಗಲಿದ್ದು, ಹೊಸ ಆಡಳಿತ ಬರಬೇಕಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸತತ ಮೂರನೇ ಬಾರಿ ಅಧಿಕಾರದ ಗದ್ದುಗೆ ಹಿಡಿಯುವ ಮೂಲಕ ಹ್ಯಾಟ್ರಿಕ್ ಸಾಧಿಸುವ ಗುರಿ ಹೊಂದಿದೆ.
ಕೇಂದ್ರದಲ್ಲಿ ಸತತ ಎರಡು ಬಾರಿ ಅಧಿಕಾರಕ್ಕೆ ಬಂದರೂ ದೆಹಲಿಯಲ್ಲಿ ಚುಕ್ಕಾಣಿ ಹಿಡಿಯಲು ವಿಫಲವಾಗಿರುವ ಬಿಜೆಪಿ ಈ ಬಾರಿ ಗೆಲ್ಲುವ ಗುರಿ ಹೊಂದಿದೆ. ಮತ್ತೊಂದೆಡೆ ಆಪ್ ಮೈತ್ರಿ ಇಲ್ಲದೇ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ.
ಚುನಾವಣೆಯನ್ನು ಪಾದರ್ಶಕವಾಗಿ ಮಾಡಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇವಿಎಂ ಹ್ಯಾಕ್ ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಈಗಗಲೇ ಸ್ಪಷ್ಟಪಡಿಸಿದೆ. ೭-೮ ದಿನಗಳ ಮುನ್ನ ಇವಿಎಂನಲ್ಲಿ ಪಕ್ಷಗಳ ಚಿಹ್ನೆ ಹಾಕಲಾಗುತ್ತದೆ. ಈ ಪ್ರಕ್ರಿಯೆ ಪಕ್ಷಗಳ ಪ್ರತಿನಿಧಿಗಳ ಮುಂದೆ ಮಾಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.