ಕೆಲವು ದಿನಗಳ ಹಿಂದೆ ಕಾಲ್ತುಳಿತ ದುರಂತದ ಮಾಸುವ ಮುನ್ನವೇ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ಕೂದಲೆಳೆ ಅಂತರದಿಂದ ತಪ್ಪಿದೆ.
ಸೋಮವಾರ ಬೆಳಿಗ್ಗೆ ತಿರುಪತಿಯ 47ನೇ ಲಡ್ಡು ಕೌಂಟರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಪ್ರಸಾದ ಸ್ವೀಕರಿಸಲು ಕೌಂಟರ್ ಬಳಿ ನಿಂತಿದ್ದ ಭಕ್ತರು ಆತಂಕದಿಂದ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ.
ಲಡ್ಡು ಕೌಂಟರ್ ನಲ್ಲಿ ಕಂಪ್ಯೂಟರ್ ಗೆ ಯುಪಿಎಸ್ ವ್ಯವಸ್ಥೆ ಅಳವಡಿಸಿದ್ದರಿಂದ ತಾಂತ್ರಿಕ ದೋಷದಿಂದ ಈ ಭಾಗದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ ೮ರಂದು ಟೋಕನ್ ವಿತರಣೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 6 ಮಂದಿ ಮೃತಪಟ್ಟ ದಾರುಣ ಘಟನೆ ನಡೆದಿತ್ತು. ದುರ್ಘಟನೆ ಬೆನ್ನಲ್ಲೇ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಸರ್ಕಾರದ ಪ್ರಮುಖರು ಭೇಟಿ ನೀಡಿ ಪರಿಶೀಲನೆ ನಡೆಸಿ ಯಾವುದೇ ಅನಾಹುತ ಆಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದರು.