ಸರಕು ಸಾಗಿಸುವ ರೋಪ್ ವೇ ಮುರಿದು ಬಿದ್ದ ಪರಿಣಾಮ 6 ಮಂದಿ ಉದ್ಯೋಗಿಗಳು ಮೃತಪಟ್ಟ ದಾರುಣ ಘಟನೆ ಗುಜರಾತ್ ನ ಪಂಚಮಹಲ್ ನಲ್ಲಿರುವ ಪಾವಗಡ ಬೆಟ್ಟದ ದೇವಸ್ಥಾನದ ಬಳಿ ಸಂಭವಿಸಿದೆ.
ದೇವಾಲಯದ ಟ್ರಸ್ಟ್, ನೌಕರರು ಮತ್ತು ವಿಶೇಷ ಅತಿಥಿಗಳ ಕಾರ್ಯಗಳಿಗೆ ಬಳಸುತ್ತಿದ್ದ ರೋಪ್ ವೇ ಇದಾಗಿದೆ. ಶನಿವಾರ ಮಧ್ಯಾಹ್ನ ಕೆಲವು ಉದ್ಯೋಗಿಗಳು ಸಂಚರಿಸುತ್ತಿದ್ದಾಗ ತಾಂತ್ರಿಕ ದೋಷದಿಂದಾಗಿ ರೋಪ್ ವೇಯ ಗೋಪುರ ಮುರಿದು ಬಿದ್ದಿದೆ.
ಮೃತರಲ್ಲಿ 2 ನಿರ್ವಾಹಕರು, 2 ಉದ್ಯೋಗಿಗಳು ಮತ್ತು 2 ಇತರರು ಸೇರಿದ್ದಾರೆ. ಘಟನೆ ವರದಿಯಾದ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆ ಸ್ಥಳಕ್ಕೆ ತಲುಪಿದೆ.
ಪಂಚಮಹಲ್ ಕಲೆಕ್ಟರ್ ಅಜಯ್ ದಹಿಯಾ ಅವರ ಹೇಳಿಕೆಯ ಪ್ರಕಾರ, ಪಾವಗಡದಲ್ಲಿ ಕಾರ್ಗೋ ರೋಪ್ವೇಯ ತಂತಿ ಮುರಿದು 6 ಜನರು ಸಾವನ್ನಪ್ಪಿದ್ದಾರೆ. ಈ ದುರಂತವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಅಪಘಾತದ ತನಿಖೆಗಾಗಿ ಸಮಿತಿಯನ್ನು ರಚಿಸಲಾಗುವುದು ಎಂದಿದ್ದಾರೆ.
ದೇವಾಲಯ ನಿರ್ಮಾಣಕ್ಕೆ ಸಾಮಗ್ರಿಗಳನ್ನು ಸಾಗಿಸುತ್ತಿದ್ದಾಗ ರೋಪ್ವೇ ವೈರ್ ಕಟ್ಟಾಗಿ ದುರಂತ ಸಂಭವಿಸಿದೆ. 6 ಮಂದಿ ಸಾವಿಗೀಡಾಗಿದ್ದಾರೆ. ಕೆಲವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆತರಲಾಗಿದೆ.
ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಇಬ್ಬರು ನಿರ್ವಾಹಕರು ಜಮ್ಮು ಮತ್ತು ಕಾಶ್ಮೀರದವರು, ಒಬ್ಬರು ರಾಜಸ್ಥಾನದವರು ಮತ್ತು ಉಳಿದ ಮೂವರು ಗುಜರಾತ್ನ ನಿವಾಸಿಗಳಾಗಿದ್ದಾರೆ. ತಂತಿ ತುಂಡಾಗಿರುವುದು ರೋಪ್ವೇ ದುರಂತಕ್ಕೆ ಕಾರಣವಾಗಿದೆ. FSL ತನಿಖೆಯ ನಂತರವೇ ಸ್ಪಷ್ಟ ಕಾರಣ ತಿಳಿದುಬರಲಿದೆ ಎಂದು ಪಂಚಮಹಲ್ ಎಸ್ಪಿ ಹರೀಶ್ ದುಧತ್ ತಿಳಿಸಿದ್ದಾರೆ.


