ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರು ಬಳಸಿಕೊಳ್ಳುವುದು ಈಗ ಫ್ಯಾಷನ್ ಆಗಿಬಿಟ್ಟಿದೆ ಎಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದ್ದು. ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿವೆ.
ಸಂವಿಧಾನ ಜಾರಿಯಾಗಿ75ನೇ ವರ್ಷಾಚರಣೆ ಅಂಗವಾಗಿ ಮಂಗಳವಾರ ಭಾಷಣ ಮಾಡಿದ ಅಮಿತ್ ಶಾ ಅಂಬೇಡ್ಕರ್ ಈಗ ಫ್ಯಾಷನ್ ಆಗಿಬಿಟ್ಟಿದ್ದರೆ ಎಂದು ಲೇವಡಿ ಮಾಡಿದರು. ಇದರಿಂದ ಕೆರಳಿದ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ಬುಧವಾರ ಬೆಳಿಗ್ಗೆ ಸಂಸತ್ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ಅವರ ಹೆಸರನ್ನು ನೀವು ೧೦೦ ಬಾರಿ ಕರೆದರೂ ಪರವಾಗಿಲ್ಲ. ಆದರೆ ಅವರ ಬಗ್ಗೆ ನಿಮ್ಮ ಭಾವನೆ ಏನೆಂದು ನನಗೆ ಗೊತ್ತಿದೆ. ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಅಂತ ಕರೆಯೋದು ಈಗ ಫ್ಯಾಷನ್ ಆಗಿಬಿಟ್ಟಿದೆ. ಇಷ್ಟು ಬಾರಿ ಅಂಬೇಡ್ಕರ್ ಹೆಸರು ಕರೆಯುವ ಬದಲು ದೇವರ ಹೆಸರು ಜಪಿಸಿದ್ದರೆ 7 ಜನ್ಮಗಳ ವರೆಗೆ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಎಂದು ಅಮಿತ್ ಶಾ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಅಮಿತ್ ಶಾ ಹೇಳಿಕೆ ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಅಂಬೇಡ್ಕರ್ ದೇವರಾಗಿದ್ದಾರೆ. ಅವರ ಬಗ್ಗೆ ಹೇಳಿಕೆ ನೀಡಿದ ಅಮಿತ್ ಶಾ ಕೂಡಲೇ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು. ಮನುಸ್ಮೃತಿಯನ್ನು ಅನುಸರಿಸುವವರು ಸಹಜವಾಗಿ ಅಂಬೇಡ್ಕರ್ ಅವರನ್ನು ವಿರೋಧಿಸುತ್ತಾರೆ. ಅಂಬೇಡ್ಕರ್ ವಿರೋಧಿಸುವವರು ಸಂವಿಧಾನದ ಅಡಿಯಲ್ಲಿ ಯಾವುದೇ ಹುದ್ದೆಯಲ್ಲಿ ಮುಂದುವರಿಯಬಾರದು ಎಂದು ಆಗ್ರಹಿಸಿದರು.
ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಶೋಷಿತರು ಹಾಗೂ ಮಹಿಳೆಯರ ಧ್ವನಿಯಾಗಿ ಅವರಿಗೆ ಸ್ವಾತಂತ್ರ್ಯ ತಂದುಕೊಟ್ಟ ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಅವರ ಅವಹೇಳನಕಾರಿ ಹೇಳಿಕೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸಂವಿಧಾನದಿಂದ ಸ್ಥಾನ ಅಲಂಕರಿಸರುವ ಅಮಿತ್ ಶಾ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಅಮಿತ್ ಶಾ ಹೇಳಿಕೆ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಸಮರ್ಥನೆಗೆ ಮುಂದಾದ ಪ್ರಧಾನಿ ಮೋದಿ, ಅಮಿತ್ ಶಾ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಹೆಸರಿನಲ್ಲಿ ಕೊಳಕು ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ನಂತರ ಅಂಬೇಡ್ಕರ್ ಕುರಿತ ಅಮಿತ್ ಶಾ ಹೇಳಿಕೆ ಹಿನ್ನೆಲೆಯಲ್ಲಿ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾತುಕತೆಗೆ ಆಹ್ವಾನಿಸಿದರು.