ಶಾಲೆಯಲ್ಲಿ ಓಟದ ಅಭ್ಯಾಸದ ವೇಳೆ ಹೃದಯಾಘಾತಕ್ಕೆ ಒಳಗಾದ 14 ವರ್ಷದ ಬಾಲಕ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಅಲಿಘಡ್ ನಲ್ಲಿ ಸಂಭವಿಸಿದೆ.
ಸಿರೌಲಿ ಗ್ರಾಮದ ಶಾಲೆಯ ಕ್ರೀಡಾ ಸಂಕೀರ್ಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಶಾಲೆಯ ಓಟದ ಸ್ಪರ್ಧೆಯ ಅಭ್ಯಾಸದ ವೇಳೆ ಮೋಹಿತ್ ಚೌಧರಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಮೋಹಿತ್ ಚೌಧರಿ ಸ್ನೇಹಿತರ ಜೊತೆ ಎರಡು ಸುತ್ತು ಓಡಿದ್ದು, ಮೂರನೇ ಸುತ್ತು ಓಡುವಾಗ ಎದೆ ನೋವಿನಿಂದ ಕುಸಿದುಬಿದ್ದಿದ್ದಾನೆ. ಕೂಡಲೇ ಮಕ್ಕಳು ಅವರ ಮನೆಯವರಿಗೆ ತಿಳಿಸಿದ್ದಾರೆ. ಮನೆಯವರು ಓಡಿ ಬಂದು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ತಡವಾಗಿದ್ದು ಬಾಲಕ ಇಹಲೋಕ ತ್ಯಜಿಸಿದ್ದ.
ಡಿಸೆಂಬರ್ 7ರಂದು ಶಾಲೆಯಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದ್ದು, ಇದಕ್ಕಾಗಿ ಮಕ್ಕಳು ಅಭ್ಯಾಸದಲ್ಲಿ ತೊಡಗಿಕೊಂಡಿದ್ದರು.