ನವದೆಹಲಿ: ಭಾರತ ಇನ್ನು ಮುಂದೆ ರಷ್ಯಾದಿಂದ ತೈಲ ಖರೀದಿ ಮಾಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಯ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರವು ಭಾರತೀಯ ತೈಲ ಸಂಸ್ಥೆಗಳು ರಷ್ಯಾದಿಂದ ತೈಲ ಆಮದು ನಿಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಕುರಿತು ಪ್ರಕಟವಾಗಿರುವ ವರದಿಗಳನ್ನು ತಳ್ಳಿ ಹಾಕಿರುವ ಸರ್ಕಾರ ಭಾರತದ ಇಂಧನ ಕುರಿತ ನಿರ್ಧಾರಗಳು ಮಾರುಕಟ್ಟೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯನ್ನು ಆಧರಿಸಿವೆ ಎಂದು ಹೇಳಿದೆ.
ಸರ್ಕಾರಿ ಸ್ವಾಮ್ಯದ ಭಾರತೀಯ ತೈಲ ಕಂಪನಿಗಳು ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸಿವೆ ಎನ್ನುವ ಕುರಿತು ಶುಕ್ರವಾರ ವರದಿಗಳು ಪ್ರಕಟವಾದ ಬೆನ್ನಲ್ಲೇ ಸರ್ಕಾರಿ ಮೂಲಗಳು ಈ ಹೇಳಿಕೆಗಳನ್ನು ತಳ್ಳಿಹಾಕಿವೆ. ಭಾರತದ ಇಂಧನ ಆಮದುಗಳು ಮಾರುಕಟ್ಟೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಪ್ರಕಾರ ನಡೆಯುತ್ತದೆ ಎಂದು ತಿಳಿಸಿದೆ.
ರಷ್ಯಾದಿಂದ ಭಾರತ ಇನ್ನು ಮುಂದೆ ತೈಲ ಖರೀದಿ ಮಾಡೋದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ವಾಷಿಂಗ್ಟನ್ ಡಿಸಿಯಲ್ಲಿ ಹೇಳಿಕೆ ನೀಡಿದ್ದು, ಇದನ್ನು ಒಳ್ಳೆಯ ಹೆಜ್ಜೆ ಎಂದು ಕರೆದಿದ್ದರು. ಭಾರತೀಯ ತೈಲ ಸಂಸ್ಥೆಗಳು ರಷ್ಯಾದ ಆಮದುಗಳನ್ನು ನಿಲ್ಲಿಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಜಾಗತಿಕವಾಗಿ ಬದಲಾಗುತ್ತಿರುವ ತೈಲ ಮಾರುಕಟ್ಟೆಯ ವ್ಯವಹಾರ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆದರಿಕೆಗಳ ಮಧ್ಯೆ ಭಾರತದ ಇಂಧನ ಅಗತ್ಯಗಳ ಕುರಿತ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣದೀಪ್ ಜೈಸ್ವಾಲ್, ಭಾರತದ ನಿಲುವು ಸ್ಪಷ್ಟವಾಗಿದೆ. ಮಾರುಕಟ್ಟೆಗಳಲ್ಲಿ ಏನು ಲಭ್ಯವಿದೆ ಮತ್ತು ಚಾಲ್ತಿಯಲ್ಲಿರುವ ಜಾಗತಿಕ ಪರಿಸ್ಥಿತಿಯನ್ನು ಆಧರಿಸಿಯೇ ಭಾರತ ತೈಲ ಖರೀದಿ ಮಾಡುತ್ತದೆ ಎಂದು ಹೇಳಿದ್ದಾರೆ.
ಕಳೆದ ಒಂದು ವಾರದಿಂದ ದೇಶದ ರಾಜ್ಯ ಸಂಸ್ಕರಣಾಗಾರಗಳಾದ ಇಂಡಿಯನ್ ಆಯಿಲ್ ಕಾರ್ಪ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಮತ್ತು ಮಂಗಳೂರು ರಿಫೈನರಿ ಪೆಟ್ರೋಕೆಮಿಕಲ್ ಲಿಮಿಟೆಡ್ ರಷ್ಯಾದಿಂದ ಕಚ್ಚಾ ತೈಲಕ್ಕೆ ಬೇಡಿಕೆ ಸಲ್ಲಿಸಿಲ್ಲ. ರಷ್ಯಾದ ತೈಲವನ್ನು ಖರೀದಿಸುವುದನ್ನು ಮುಂದುವರಿಸುವ ದೇಶಗಳ ಮೇಲೆ ಅಮೆರಿಕ ಒತ್ತಡ ಹೇರಿದ್ದರಿಂದ ಹೀಗಾಗಿದೆ ಎಂದು ಅವರು ತಿಳಿಸಿದ್ದಾರೆ.
ರಷ್ಯಾ ಮತ್ತು ಭಾರತದ ಸಂಬಂಧವನ್ನು ಸಮರ್ಥಿಸಿಕೊಂಡಿರುವ ಸರ್ಕಾರ, ಇದು ಭಾರತ ಮತ್ತು ಅಮೆರಿಕ ಸಂಬಂಧದ ಪರೀಕ್ಷೆಯ ಸಮಯ ಎಂದು ಹೇಳಿದೆ. ಉದ್ವಿಗ್ನತೆಗಳ ಹೊರತಾಗಿಯೂ ಅಮೆರಿಕದೊಂದಿಗೆ ಭಾರತ ಉತ್ತಮ ಬಾಂಧವ್ಯವನ್ನು ಮುಂದುವರಿಸಲಿದೆ ಎಂದು ಜೈಸ್ವಾಲ್ ವಿಶ್ವಾಸ ವ್ಯಕ್ತಪಡಿಸಿದರು.


