ಡಮಾಸ್ಕಸ್: 13 ವರ್ಷಗಳ ಸತತ ಪ್ರಯತ್ನದ ಬಳಿಕ ಅಬು ಮೊಹಮ್ಮದ್ ಅಲ್-ಜಲೋನಿ ನೇತೃತ್ವದ ಬಂಡುಕೋರರು ಸಿರಿಯಾದಲ್ಲಿ ಅಧಿಕಾರ ಪಲ್ಲಟ ಮಾಡಿದ್ದಾಗಿದೆ.
ಬಷರ್ ಅಲ್-ಅಸ್ಸಾದ್ ನೇತೃತ್ವದ ಸರಕಾರಕ್ಕೆ ಬಂಡುಕೋರರು ಅಂತ್ಯಗೀತೆ ಹಾಡಿದ್ದು, ಹೊಸ ಆಡಳಿತ ಸ್ಥಾಪಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದಾರೆ.
ಬಂಡುಕೋರರು ಮುಂದುವರಿದಂತೆ ಅಸ್ಸಾದ್ ಸಿರಿಯಾದಿಂದ ಪಲಾಯನ ಮಾಡಿದ್ದು, ಅವರಿಗೆ ರಷ್ಯಾವು ಆಶ್ರಯ ನೀಡಿದೆ ಎಂದು ಮಾಧ್ಯಮಗಳು ಭಾನುವಾರ ರಾತ್ರಿ ತಿಳಿಸಿವೆ.
ಭಾರತಕ್ಕೆ ಲಾಭ-ನಷ್ಟ
ಭಾರತ ಮತ್ತು ಸಿರಿಯಾ ದಶಕಗಳಿಂದ ನಿಕಟ ಸಂಬಂಧವನ್ನು ಹೊಂದಿವೆ. ಗೋಲನ್ ಹೈಟ್ಸ್ ಮೇಲೆ ದೇಶದ ಹಕ್ಕು ಸೇರಿದಂತೆ ಅಂತರರಾಷ್ಟ್ರೀಯ ವಿಷಯಗಳಲ್ಲಿ ಸಿರಿಯಾವನ್ನು ಬೆಂಬಲಿಸುತ್ತವೆ.
ಅದೇ ರೀತಿ ಸಿರಿಯಾ ಕೂಡ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಕಾಶ್ಮೀರ ವಿಷಯದ ಬಗ್ಗೆ ನವದೆಹಲಿಯ ನಿಲುವನ್ನು ಬೆಂಬಲಿಸಿದೆ.
೨೦೧೧ರಲ್ಲಿ ಸಿರಿಯಾದಲ್ಲಿ ಅಂತರ್ಯುದ್ಧ ಭುಗಿಲೆದ್ದಾಗಿನಿಂದ, ಮಾತುಕತೆ ಮತ್ತು ಮಿಲಿಟರಿಯೇತರ ರಾಜಕೀಯ ಪ್ರಕ್ರಿಯೆಯ ಮೂಲಕ ಸಂಘರ್ಷವನ್ನು ಪರಿಹರಿಸಲು ಭಾರತ ಕರೆ ನೀಡಿತ್ತು.
ಇದಲ್ಲದೆ, ಕೋವಿಡ್ -೧೯ ಸಾಂಕ್ರಾಮಿಕ ಸಮಯದಲ್ಲಿ ಮಾನವೀಯ ಆಧಾರದ ಮೇಲೆ ವಿಶ್ವಸಂಸ್ಥೆಯಲ್ಲಿ ಸಿರಿಯಾ ವಿರುದ್ಧದ ನಿರ್ಬಂಧಗಳನ್ನು ಸಡಿಲಿಸುವಂತೆ ಭಾರತ ಕರೆ ನೀಡಿತ್ತು.
ಈಗ ಅಸ್ಸಾದ್ ಅವರ ಪತನವು ಪಶ್ಚಿಮ ಏಷ್ಯಾದಲ್ಲಿ ಮತ್ತೊಂದು ಅಫ್ಘಾನಿಸ್ತಾನದ ಸೃಷ್ಟಿಗೆ ಕಾರಣವಾಗಬಹುದು ಎಂದು ಹಲವರು ಹೇಳುತ್ತಿದ್ದಾರೆ.
ಈ ಅಧಿಕಾರ ಬದಲಾವಣೆಯು ಭಾರತಕ್ಕೆ ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳ ಬಗ್ಗೆ ಕಳವಳ ತಂದಿದೆ. ಇರಾನ್, ಟರ್ಕಿ ಮತ್ತು ರಷ್ಯಾ ಈ ಪ್ರದೇಶದಲ್ಲಿ ಪ್ರಮುಖ ಆಟಗಾರರಾಗಿ ಇರುವುದರಿಂದ, ಭಾರತವು ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಿದೆ.
ಡಮಾಸ್ಕಸ್‌ನಲ್ಲಿ ಅಧಿಕಾರವನ್ನು ವಹಿಸಿಕೊಂಡಿರುವ ಎಚ್‌ಟಿಎಸ್ ಸಂಘಟನೆಯು ಅಲ್‌ಖೈದಾ ಜೊತೆ ನಂಟು ಹೊಂದಿದ್ದು, ವಿಶ್ವಸಂಸ್ಥೆಯಿಂದ ಭಯೋತ್ಪಾದಕ ಸಂಘಟನೆ ಎಂದು ಕರೆಸಿಕೊಂಡಿದೆ.
ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ ಖೈದಾ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿರುವುದಾಗಿ ಈ ಗುಂಪು ಹೇಳಿದೆ.
ಇತ್ತೀಚಿನ ವರ್ಷಗಳಲ್ಲಿ ತಮ್ಮ ಭೂಪ್ರದೇಶದಲ್ಲಿ ನಾಗರಿಕ ಸರ್ಕಾರವನ್ನು ಉತ್ತೇಜಿಸುವತ್ತ ಗಮನ ಹರಿಸುವ ಮೂಲಕ ತನ್ನನ್ನು ಅದು ತನ್ನ ಸ್ವರೂಪ ಬದಲಿಸಿಕೊಂಡಿದೆ.
ಆದರೆ ಹುಟ್ಟುಗುಣದ ಗಾದೆ ಗೊತ್ತಿರುವ ಭಾರತ ಕಣ್ಣುಮುಚ್ಚಿ ಈ ಸಂಘಟನೆಯಪಂದಿಗೆ ವ್ಯವಹಾರ ಕುದುರಿಸಲು ಸಾಧ್ಯವಿಲ್ಲ. ಹಾಗೆಂದು ಸುಮ್ಮನೇ ಕೂರಲೂ ಆಗದು. ಹೀಗಾಗಿ ಇದೊಂದು ಇಕ್ಕಟ್ಟಿನ ಪರಿಸ್ಥಿತಿಯಾಗಿ ಪರಿಣಮಿಸಿದೆ.