ನವದೆಹಲಿ: ದಟ್ಟವಾದ ಮಂಜಯ ಮುಸುಕಿದ ಪರಿಣಾಮ ಉತ್ತರ ಭಾರತದ ವಿವಿಧೆಡೆ ವಿಮಾನ ಮತ್ತು ರೈಲು ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.
ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಗೋಚರತೆ ಶೂನ್ಯಕ್ಕೆ ಇಳಿದಿದ್ದರಿಂದ ೨೦೨ ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ.
ಭಾರತೀಯ ಹವಾಮಾನ ಇಲಾಖೆ (ಐಂಡಿ) ಮಾಹಿತಿಯ ಪ್ರಕಾರ, ದೆಹಲಿಯಲ್ಲಿ ೧೬ ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಇದ್ದು, ಸಾಮಾನ್ಯಕ್ಕಿಂತ ಮೂರು ಡಿಗ್ರಿಗಳಷ್ಟು ಕಡಿಮೆಯಾಗಿದೆ. ಕನಿಷ್ಠ ತಾಪಮಾನ ೭.೬ ಡಿಗ್ರಿ ಸೆಲ್ಸಿಯಸ್ ಇದೆ.
ಪ್ರತಿಕೂಲ ಹವಾಮಾನದಿಂದಾಗಿ ಅಮೃತಸರ ಮತ್ತು ಗುವಾಹಟಿಗೆ ಬರುವ ಮತ್ತು ಹೋಗುವ ಎಲ್ಲಾ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ ಎಂದು ಸ್ಪೈಸ್ಜೆಟ್ ಹೇಳಿದೆ. ದೆಹಲಿ, ಅಮೃತಸರ, ಲಕ್ನೋ, ಬೆಂಗಳೂರು ಮತ್ತು ಗುವಾಹಟಿ ಮಾರ್ಗಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ ಎಂದು ಇಂಡಿಗೋ ತಿಳಿಸಿದೆ.
ಹವಾಮಾನ ಇದೇ ರೀತಿ ಮುಂದುವರಿದರೆ ಕಡಿಮೆ ಗೋಚರತೆಯಿಂದಾಗಿ ವಿಮಾನಗಳು ರದ್ದಾಗಬಹುದು ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.
24 ರೈಲುಗಳ ಸಂಚಾರ ವ್ಯತ್ಯಯ
ಹವಾಮಾನ ಸಂಬಂಧಿತ ಪರಿಸ್ಥಿತಿಗಳಿಂದಾಗಿ ದೆಹಲಿಯಿಂದ ಹೊರಡುವ ಕನಿಷ್ಠ ೨೪ ರೈಲುಗಳು ವಿಳಂಬವಾಗಿವೆ. ಅಯೋಧ್ಯೆ ಎಕ್ಸ್ಪ್ರೆಸ್ ನಾಲ್ಕು ಗಂಟೆಗಳ ಕಾಲ ವಿಳಂಬವಾಗಿ ಸಂಚರಿಸಿದೆ.
ಗೋರಖ್ಧಾಮ್ ಎಕ್ಸ್ಪ್ರೆಸ್ ಎರಡು ಗಂಟೆಗಳಿಗಿಂತ ಹೆಚ್ಚು ತಡವಾಗಿ ಪ್ರಯಾಣ ಬೆಳೆಸಿದೆ. ಬಿಹಾರ ಕ್ರಾಂತಿ ಎಕ್ಸ್ಪ್ರೆಸ್ ಮತ್ತು ಶ್ರಮ ಶಕ್ತಿ ಎಕ್ಸ್ಪ್ರೆಸ್ ಮೂರು ಗಂಟೆಗಳಿಗೂ ಹೆಚ್ಚು ವಿಳಂಬವಾಗಿದೆ.
ದೆಹಲಿ, ಲಕ್ನೋ, ಬೆಂಗಳೂರು, ಅಮೃತಸರ ಮತ್ತು ಗುವಾಹಟಿಯಲ್ಲಿ ದಟ್ಟವಾದ ಮಂಜು ಆವರಿಸಿದೆ. ದೆಹಲಿ, ರಾಜಸ್ಥಾನದ ಕೋಟಾ, ಬುಂದಿ, ಸಿಕರ್, ಜುಂಜುನು, ಚುರು, ಶ್ರೀ ಗಂಗಾನಗರ ಮತ್ತು ಟೋಂಕ್, ಪಂಜಾಬ್ನ ಅಮೃತಸರ, ಗುರುದಾಸ್ಪುರ, ತರ್ನ್ ತರಣ್ ಮತ್ತು ಕಪುರ್ತಲ, ಮತ್ತು ಹರಿಯಾಣದ ಕುರುಕ್ಶೆತ್ರಾದಲ್ಲಿ ದಟ್ಟವಾದ ಮಂಜು ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದ್ದು, ಆರೆಂಜ್ ಅಲರ್ಟ್ ಘೋಷಿಸಿದೆ.