ಕನಿಷ್ಠ ಬೆಂಬಲ ಬೆಲೆ ಸೇರಿದಂತೆ 5 ವರ್ಷ ಹಳೆಯ ಬೇಡಿಕೆಗಳಿಗೆ ಆಗ್ರಹಿಸಿ ರೈತರು ಆರಂಭಿಸಿದ `ದೆಹಲಿ ಚಲೋ’ ಪ್ರತಿಭಟನೆ ವೇಳೆ ಪೊಲೀಸರು ಅಶ್ರುವಾಯು ಸಿಡಿಸಿದ್ದರಿಂದ 8 ರೈತರು ಗಾಯಗೊಂಡಿದ್ದಾರೆ.
ದೆಹಲಿ ಸಮೀಪದ ಹರಿಯಾಣ ಮತ್ತು ಪಂಜಾಬ್ ಗಡಿಯ ಸಮೀಪದ ಶಂಬು ಎಂಬ ಪ್ರದೇಶದ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ರೈತರ ಮೇಲೆ ಪೊಲೀಸರು ಅಶ್ರುವಾಯು ಸಿಡಿಸಿದ್ದರಿಂದ 8 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
ಪೊಲೀಸರು ನಮ್ಮ ಮೇಲೆ ಪೂರ್ಣ ಪ್ರಮಾಣದ ಮೇಲೆ ದಾಳಿ ನಡೆಸಿದ್ದಾರೆ. ನಾವು ಶಾಂತಿಯುತವಾಗಿ ಮತ್ತು ಶಿಸ್ತಿನಿಂದ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದೇವೆ. ನಮ್ಮ ವಿರುದ್ಧ ಪಡೆಗಳನ್ನು ಬಳಸಿದರೆ ನಾವು ಹೋರಾಡಲಾರೆವು ಎಂಬುದು ಗೊತ್ತಿದೆ. ಆದ್ದರಿಂದ ನಾವು ಇಂದು ಪ್ರತಿಭಟನೆಯನ್ನು ನಿಲ್ಲಿಸಿದ್ದೇವೆ ಎಂದು ರೈತ ಸಂಘಟನೆ ಮುಖಂಡ ಸರವಣ್ ಸಿಂಗ್ ಪಂಡೇರ್ ತಿಳಿಸಿದ್ಧಾರೆ.
ನಮ್ಮ ವಿರುದ್ಧ ಕಾರ್ಯಾಚರಣೆ ನಡೆಸುವ ಮೂಲಕ ರೈತರ ಪ್ರತಿಭಟನೆ ಹತ್ತಿಕ್ಕಬಲ್ಲೆವು ಎಂದು ಮೋದಿ ಅಂದುಕೊಂಡಿದ್ದರೆ ಅದು ತಪ್ಪು, ಈ ಬೆಳವಣಿಗೆ ನಮಗೆ ನೋವುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.