ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸಂವಿಧಾನ ಹಿಡಿದು ಪ್ರಮಣ ವಚನ ಸ್ವೀಕರಿಸುವ ಮೂಲಕ ಲೋಕಸಭೆಯಲ್ಲಿ ಸಂಸದೆಯಾಗಿ ಪಾದಪರ್ಣೆ ಮಾಡಿದ್ದಾರೆ.
ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ೩.೬೧ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯ ಸಾಧಿಸಿ ಸಂಸದೆಯಾಗಿ ಆಯ್ಕೆಯಾಗಿದ್ದ ಪ್ರಿಯಾಂಕಾ ಗಾಂಧಿ ಗುರುವಾರ ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಸೋದರ ರಾಹುಲ್ ಗಾಂಧಿ ಬಿಟ್ಟುಕೊಟ್ಟಿದ್ದ ಕ್ಷೇತ್ರದಲ್ಲಿ ಗೆದ್ದು ಬಂದ ಪ್ರಿಯಾಂಕಾ ಗಾಂಧಿ ಸಂವಿಧಾನ ಪುಸ್ತಕವನ್ನು ಕೈಯಲ್ಲಿ ಹಿಡಿದು ಪ್ರಮಾಣ ವಚನ ಸ್ವೀಕರಿಸುವ ಮೂಲಕ ರಾಹುಲ್ ಗಾಂಧಿಯನ್ನು ಅನುಕರಿಸಿದರು.
ಇದರೊಂದಿಗೆ ಗಾಂಧಿ ಕುಟುಂಬದ ಮೂವರು ಲೋಕಸಭೆ ಪ್ರವೇಶಿಸಿದಂತಾಯಿತು. ತಾಯಿ ಸೋನಿಯಾ ಗಾಂಧಿ ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿದ್ದರೆ, ರಾಹುಲ್ ಮತ್ತು ಪ್ರಿಯಾಂಕಾ ಲೋಕಸಭಾ ಸದಸ್ಯರಾಗಿದ್ದಾರೆ.
ಪ್ರಮಾಣ ವಚನ ಸ್ವೀಕರಿಸುವ ಮುನ್ನ ಪ್ರಿಯಾಂಕಾ ಗಾಂಧಿ ವಾದ್ರಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ವಯನಾಡು ಕ್ಷೇತ್ರದ ಜನತೆಗೆ ಅಭಿನಂದನೆ ಸಲ್ಲಿಸಿದ್ದು, ನನ್ನನ್ನು ಸಂಸದೆಯಾಗಿ ಆಯ್ಕೆ ಮಾಡಿದ ಸೋದರ-ಸೋದರಿಯರೇ ನಿಮ್ಮ ಧ್ವನಿಯಾಗಿ ನಾನು ಸಂಸತ್ ನಲ್ಲಿ ಧ್ವನಿ ಎತ್ತುತ್ತೇನೆ ಎಂದಿದ್ದಾರೆ.
ವಿಶೇಷ ಅಂದರೆ ಕೇರಳ ಸಂಪ್ರದಾಯವನ್ನು ಪ್ರತಿನಿಧಿಸುವ ಬಿಳಿ ಹಾಗೂ ಚಿನ್ನ ಮತ್ತು ಬೆಳ್ಳಿಯ ಬಣ್ಣದ ಬಾರ್ಡರ್ ಇರುವ ಕಸವು ಸೀರೆ ಧರಿಸಿ ಪ್ರಿಯಾಂಕಾ ಪ್ರಮಾಣ ವಚನ ಸ್ವೀಕರಿಸಿದರು.