ಸಭಾಪತಿ ಜಗದೀಪ್ ಧನ್‌ಕರ್ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಭಾರೀ ಗದ್ಧಲ ಸೃಷ್ಟಿಸಿದ್ದರಿಂದ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.
ಬುಧವಾರ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷ ಸದಸ್ಯರು ಸಭಾಪತಿ ಜಗದೀಪ್ ಧನ್ ಕರ್ ವಿರುದ್ಧ ಅವಿಶ್ವಾಸ ನಿರ್ಣಯ ಕುರಿತು ಚರ್ಚೆಗೆ ಒತ್ತಾಯಿಸಿದರು. ಇದಕ್ಕೆ ಸಭಾಪತಿ ಒಪ್ಪದೇ ಇದ್ದಾಗ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಕಲಾಪಕ್ಕೆ ಅಡ್ಡಿಯುಂಟು ಮಾಡಿದರು.
ಸದಸ್ಯರು ಘೋಷಣೆಗಳನ್ನು ಕೂಗಿ ಯಾವುದೇ ವಿಷಯ ಕೇಳಿಸದೇ ಇದ್ದಾಗ ಸಭಾಪತಿ ಸದನವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಿದರು. ನಂತರ ಕಲಾಪ ಆರಂಭವಾದಾಗರೂ ವಿಪಕ್ಷಗಳು ಗದ್ದಲವನ್ನು ಮುಂದುವರೆಸಿದವು. ಹೀಗಾಗಿ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.
ಪ್ರತಿಪಕ್ಷಗಳ ವಿಚಾರದಲ್ಲಿ ಉದ್ದೇಶಪೂರ್ವಕವಾಗಿ ಪಕ್ಷಪಾತ ಹಾಗೂ ಪ್ರತಿಪಕ್ಷ ನಾಯಕರು ಮಾತನಾಡಲು ನೀಡುವ ಸಮಯದ ವಿಷಯದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯಸಭೆ ಸಭಾಪತಿ ಜಗದೀಪ್ ಧನ್‌ಕರ್ ವಿರುದ್ಧ ಮಂಗಳವಾರ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿವೆ.
ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ ಕರ್ ಏಕಪಕ್ಷೀಯ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದು, ಪ್ರತಿಪಕ್ಷಗಳನ್ನು ಕಣ್ಣಿಟ್ಟು ಕನಿಷ್ಠ ನೋಡುವ ಪ್ರಯತ್ನವನ್ನೂ ಮಾಡುವುದಿಲ್ಲ. ಪ್ರತಿಪಕ್ಷ ಸದಸ್ಯರು ಹಾಗೂ ಅವರ ಪಕ್ಷಗಳನ್ನು ಕಡೆಗಣಿಸುತ್ತಿರುವ ಜಗದೀಪ್ ಧನ್ ಕರ್ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿವೆ.
ಪ್ರತಿಪಕ್ಷಗಳಿಗೆ ಕೆಲವೇ ಮತಗಳಿಂದ ಬಹುಮತ ಇಲ್ಲದೇ ಇದ್ದರೂ ರಾಜ್ಯಸಭೆಯಲ್ಲಿ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ರಾಜ್ಯಸಭಾ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಆಸನದಲ್ಲಿ ೫೦೦ ರೂ. ಮುಖಬೆಲೆಯ ನೋಟಿನ ಕಂತೆ ಸಿಕ್ಕಿರುವ ಪ್ರಕರಣದಲ್ಲಿ ತನಿಖೆ ನಡೆಸುವ ಮುನ್ನವೇ ಮನುಸಿಂಘ್ವಿಗೆ ಸೇರಿದ್ದು ಎಂದು ಹೆಸರು ಪ್ರಸ್ತಾಪಿಸಿರುವುದಕ್ಕೆ ಪ್ರತಿಪಕ್ಷಗಳು ಆರೋಪಿಸಿವೆ.
ಕೇಂದ್ರ ಸಂಸದೀಯ ಖಾತೆ ಸಚಿವ ಕಿರಣ್ ರಿಜಿಜು, ಎನ್ ಡಿಎಗೆ ರಾಜ್ಯಸಭೆಯಲ್ಲಿ ಬಹುಮತ ಇದೆ. ಹಾಗಾಗಿ ಪ್ರತಿಪಕ್ಷಗಳು ಸೋಲಿನ ಭೀತಿ ಇದ್ದರೂ ರಾಜ್ಯಸಭಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿವೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್, ಆರ್‌ಜೆಡಿ, ಟಿಎಂಸಿ, ಸಿಪಿಐ, ಸಿಪಿಐ(ಎಂ), ಜೆಎಂಎಂ, ಎಎಪಿ, ಡಿಎಂಕೆ, ಮತ್ತು ಸಮಾಜವಾದಿ ಪಕ್ಷ ಸೇರಿ 60ಕ್ಕೂ ಹೆಚ್ಚು ಪ್ರತಿಪಕ್ಷಗಳ ಸಂಸದರು ಸಹಿ ಹಾಕಿದ್ದಾರೆ.
ಸಹಿ ಹಾಕಿದ ನೋಟಿಸ್ ಅನ್ನು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪ್ರತಿಪಕ್ಷಗಳ ಪರವಾಗಿ ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಮತ್ತು ನಾಸೀರ್ ಹುಸೇನ್ ಸಲ್ಲಿಸಿದ್ದಾರೆ.