ನವದೆಹಲಿ: ರಾಮಮಂದಿರ ಪ್ರತಿಷ್ಠಾಪನಾ ದಿನ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತೇ ಹೊರತು 1947ರಲ್ಲಿ ಅಲ್ಲ ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಮೋಹನ್ ಭಾಗವತ್ ಅವರ ಹೇಳಿಕೆ ಎಲ್ಲಾ ಭಾರತೀಯರಿಗೆ ಮಾಡಿದ ಅವಮಾನ ಎಂದು ಟೀಕಿಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಆರ್‌ಎಸ್‌ಎಸ್ ಮುಖ್ಯಸ್ಥರು ದೇಶದ್ರೋಹ ಎಸಗಿದ್ದಾರೆ. ಅವರನ್ನು ಜೈಲಿಗೆ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಕಾಂಗ್ರೆಸ್ ನ ನೂತನ ಪ್ರಧಾನ ಕಚೇರಿ, ಇಂದಿರಾ ಗಾಂಧಿ ಭವನ ಉದ್ಘಾಟನೆಯ ನಂತರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಕಾಂಗ್ರೆಸ್ ಅಧ್ಯಕ್ಷ, ಜನರು ಅಂತಹ “ಅಸಂಬದ್ಧ” ಮಾತುಗಳನ್ನು ಕೇಳುವುದನ್ನು ನಿಲ್ಲಿಸುವ ಸಮಯ ಬಂದಿದೆ ಎಂದರು.
“ಸಂವಿಧಾನವು ನಮ್ಮ ಸ್ವಾತಂತ್ರ್ಯದ ಸಂಕೇತವಲ್ಲ ಎಂಬ ಮೋಹನ್ ಭಾಗವತ್ ಹೇಳಿಕೆ ಅತ್ಯಂತ ಆಘಾತಕಾರಿಯಾಗಿದೆ. ಸ್ವಾತಂತ್ರ್ಯ ಚಳುವಳಿ ಮತ್ತು ಸಂವಿಧಾನದ ಕುರಿತು ಮೋಹನ್ ಭಾಗವತ್ ದೇಶದ್ರೋಹಿ ಹೇಳಿಕೆ ನೀಡಿದ್ದಾರೆ.
ಒಂದು ವೇಳೆ ಮೋಹನ್ ಭಾಗವತ್ ಬೇರೆ ದೇಶದಲ್ಲಿದ್ದರೆ, ಇಷ್ಟೊತ್ತಿಗೆ ಅವರನ್ನು ಬಂಧಿಸಿ ಜೈಲಿಗೆ ತಳ್ಳಿರುತ್ತಿದ್ದರು..” ಎಂದು ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು.
ಭಾರತೀಯರಿಗೆ ಮಾಡಿದ ಅವಮಾನ
“ಮೋಹನ್ ಭಾಗವತ್ ಸ್ವಾತಂತ್ರ್ಯ ಚಳುವಳಿ ಮತ್ತು ಸಂವಿಧಾನದ ಬಗೆಗಿನ ತಮ್ಮ ಅಸಹನೀಯ ಅಭಿಪ್ರಾಯವನ್ನು ದೇಶಕ್ಕೆ ತಿಳಿಸುವ ಧೈರ್ಯ ತೋರಿದ್ದಾರೆ. ವಾಸ್ತವವಾಗಿ ಮೋಹನ್ ಭಾಗವತ್ ದೇಶದ್ರೋಹಿ ಹೇಳಿಕೆ ನೀಡಿದ್ದಾರೆ.
ಬೇರೆ ಯಾವುದೇ ದೇಶದಲ್ಲಿ ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗುತ್ತಿತ್ತು. ೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಗಲಿಲ್ಲ ಎಂದು ಹೇಳುವ ಮೂಲಕ, ಮೋಹನ್ ಭಾಗವತ್ ಪ್ರತಿಯೊಬ್ಬ ಭಾರತೀಯನಿಗೂ ಅವಮಾನ ಮಾಡಿದ್ದಾರೆ..” ಎಂದು ರಾಹುಲ್ ಗಾಂಧಿ ಕಿಡಿಕಾರಿದರು.
“ಬ್ರಿಟಿಷರ ವಿರುದ್ಧದ ದೇಶದ ಹೋರಾಟವನ್ನು ಮೋಹನ್ ಭಾಗವತ್ ಕ್ಷಣಮಾತ್ರದಲ್ಲಿ ತಿರಸ್ಕರಿಸಿದ್ದಾರೆ. ಈ ಮೂಲಕ ಲಕ್ಷಾಂತರ ಜನರ ತ್ಯಾಗ-ಬಲಿದಾನವನ್ನು ಮೋಹನ್ ಭಾಗವತ್ ಅಪಮಾನಕ್ಕೀಡು ಮಾಡಿದ್ದಾರೆ.
ಮೋಹನ್ ಭಾಗವತ್ ಅವರ ದೇಶದ್ರೋಹಿ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ..” ಎಂದು ಕಾಂಗ್ರೆಸ್ ನಾಯಕ ಹರಿಹಾಯ್ದರು.
“ಹೊಸದಿಲ್ಲಿಯಲ್ಲಿ ಇಂದು (ಜ.15-ಬುಧವಾರ) ಉದ್ಘಾಟನೆಯಾದ ಕಾಂಗ್ರೆಸ್ ಪಕ್ಷದ ನೂತನ ಕಚೇರಿ ‘ಇಂದಿರಾ ಭವನ’ವು, ಸರಿಯಾದ ಸಮಯದಲ್ಲಿ ಅಸ್ತಿತ್ವಕ್ಕೆ ಬಂದಿದೆ ಎಂಬುದು ನನ್ನ ಭಾವನೆ.
ದೇಶ ಒಂದು ಕಡೆ ಕೋಮುವಾದಿಗಳ ಕೈಯಲ್ಲಿ ನರಳುತ್ತಿದ್ದು, ಈ ವಿಷಮ ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ನೈಜ ಭಾರತದ ಪರಿಕಲ್ಪನೆಯನ್ನು ಜನರಿಗೆ ಮನವರಿಕೆ ಮಾಡಿಕೊಡಲು ಈ ಕಟ್ಟಡ ಅವಶ್ಯವಾಗಿದೆ..” ಎಂದು ರಾಹುಲ್ ಗಾಂಧಿ ಇದೇ ವೇಳೆ ಅಭಿಪ್ರಾಯಪಟ್ಟರು.
ಇನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
“ಬಿಜೆಪಿ, ಆರ್‌ಎಸ್‌ಎಸ್ ಜೊತೆಗೆ ನಾವೀಗ ಆರ್‌ಎಸ್‌ಎಸ್ ಪ್ರಭಾವ ಇರುವ ಭಾರತದ ರಾಜ್ಯ ವ್ಯವಸ್ಥೆ ವಿರುದ್ಧವೂ ಹೋರಾಟ ಮಾಡಬೇಕಾಗಿದೆ..” ಎಂದು ಹೇಳುವ ರಾಹುಲ್ ಗಾಂಧಿ ಹೇಳಿದರು.