ಕ್ಯಾನ್ಸರ್ ನಿಂದ ಬಳಲುತ್ತಿದ್ದ ತಾಯಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯನಿಗೆ ಮಗ 7 ಬಾರಿ ಚಾಕುವಿನಿಂದ ಇರಿದ ಆಘಾತಕಾರಿ ಘಟನೆ ಚೆನ್ನೈನಲ್ಲಿ ನಡೆದಿದೆ.
ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಈ ಕೃತ್ಯ ಎಸಗಿದ್ದಾನೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವೈದ್ಯರ ಎದೆ ಮತ್ತು ಮುಖದ ಮೇಲೆ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿರುವ ವೈದ್ಯರನ್ನು ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಒಪಿಡಿ ವಿಭಾಗದಲ್ಲಿ ವೈದ್ಯನ ಮೇಲೆ ಕ್ಯಾನ್ಸರ್ ಪೀಡಿತ ತಾಯಿಯ ಮಗ ಮನ ಬಂದಂತೆ ಚಾಕುವಿನಿಂದ ಇರಿದಿದ್ದು, ಹೊಟ್ಟೆ, ಬೆನ್ನು ಮತ್ತು ಕಿವಿಯ ಹಿಂಭಾಗದಲ್ಲೂ ಗಾಯಗಳಾಗಿವೆ ಎಂದು ಸಹದ್ಯೋಗಿ ವೈದ್ಯರು ತಿಳಿಸಿದ್ದಾರೆ.
ಘಟನೆ ಬಗ್ಗೆ ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಹ್ಮಣ್ಯನ್ ಕೂಡ ಆಘಾತ ವ್ಯಕ್ತಪಡಿಸಿದ್ದು, ವೈದ್ಯರ ಆರೋಗ್ಯ ಸ್ಥಿರವಾಗಿದ್ದು, ಚಾಕು ಇರಿದ ಯುವಕನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
೨೬ ವರ್ಷದ ಯುವಕ ತಾಯಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂಬ ಅಸಮಾಧಾನದಿಂದ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಸಣ್ಣ ಚಾಕುವಿನಿಂದ ಇರಿದಿದ್ದರಿಂದ ವೈದ್ಯರು ದೊಡ್ಡ ಗಾಯದಿಂದ ಪಾರಾಗಿದ್ದರೂ ಎದೆಗೆ ಚಾಕು ಹಾಕಿರುವುದರಿಂದ ಹಾಗೂ ಹೃದಯ ಸಂಬಂಧಿ ಕಾಯಿಲೆ ಹೊಂದಿರುವುದರಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.