ಬೆಳಗಾವಿ: ಕಬ್ಬಿಗೆ ಪ್ರತಿ ಟನ್‌ಗೆ 3,500 ರೂಪಾಯಿ ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿತ್ತುರುವ ರೈತರು ಮತ್ತು ರಾಜ್ಯ ಸರ್ಕಾರದ ನಡುವಿನ ಸಂಧಾನ ಸಭೆ ವಿಫಲವಾಗಿದೆ.
ಸುವರ್ಣ ವಿಧಾನಸೌಧದ ಪ್ರವೇಶ ದ್ವಾರದ ಎದುರು ಸಮಾವೇಶಗೊಂಡಿದ್ದ ಪ್ರತಿಭಟನಾಕಾರರು ಮತ್ತು ಸರ್ಕಾರದ ಪ್ರತಿನಿಧಿಯಾಗಿ ಬಂದಿದ್ದ ಸಚಿವ ಎಂಬಿ ಪಾಟೀಲ್ ನಡುವಣ ಸಂಧಾನ ಸಭೆ ವಿಫಲಗೊಂಡಿದ್ದು, ತಮ್ಮ ಬೇಡಿಕೆ ಈಡೇರಿಸಲು ನಾಳೆ ಸಂಜೆ 8 ಗಂಟೆವರೆಗೆ ರೈತರು ಗಡುವು ನೀಡಿದ್ದಾರೆ.
ರೈತರ ಜೊತೆ ಸಭೆ ನಡೆಸಿದ ನಂತರ ಮಾತನಾಡಿದ ಎಂಬಿ ಪಾಟೀಲ್, ನಾಳೆ ಸಚಿವ ಸಂಪುಟ ಸಭೆಯಲ್ಲಿ ಕಬ್ಬು ಬೆಳೆಗಾರರ ಬೇಡಿಕೆ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸಭೆಗೂ ಮುನ್ನ ರೈತರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವಂತೆ ಸಲಹೆ ನೀಡಿದರು.
ಪ್ರತಿಭಟನೆ ನಡೆಸುತ್ತಿರುವ ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ ಸೂಚಿಸಿ, ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡ ಬಣ) ಕಾರ್ಯಕರ್ತರು ಬುಧವಾರ ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ತೀವ್ರ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ಸುವರ್ಣ ಸೌಧದ ಮುಂದೆ ರಣಕೇಕೆ:
ಸುವರ್ಣ ವಿಧಾನಸೌಧದ ಪ್ರವೇಶ ದ್ವಾರದ ಎದುರು ಸಮಾವೇಶಗೊಂಡ ವೇದಿಕೆಯ ಕಾರ್ಯಕರ್ತರು, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಹೆದ್ದಾರಿಯ ಮಧ್ಯಭಾಗದಲ್ಲಿ ಪ್ರತಿಭಟನೆ ಆರಂಭಿಸಿದರು. ಪ್ರತಿಭಟನೆ ವೇಳೆ ವಿನೂತನ ಪ್ರತಿಭಟನೆಗೆ ಇಳಿದ ಕಾರ್ಯಕರ್ತರು, ರಸ್ತೆಯ ಮಧ್ಯದಲ್ಲೇ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಇದರಿಂದ ರಾಷ್ಟ್ರೀಯ ಹೆದ್ದಾರಿಯ ಎರಡೂ ದಿಕ್ಕಿನ ಸಂಚಾರವು ಸಂಪೂರ್ಣ ಸ್ಥಗಿತಗೊಂಡು ಪ್ರಯಾಣಿಕರು ಮತ್ತು ವಾಹನ ಸವಾರರು ತೀವ್ರ ತೊಂದರೆ ಎದುರಿಸುವಂತಾಯಿತು.
ಪೊಲೀಸರ ಮನವೊಲಿಕೆ ವಿಫಲ, ಕಾರ್ಯಕರ್ತರು ವಶಕ್ಕೆ:
ಪ್ರತಿಭಟನೆಯ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿ ಪ್ರತಿಭಟನಾ ನಿರತ ಕಾರ್ಯಕರ್ತರ ಮನವೊಲಿಕೆಗೆ ಮುಂದಾದರು. ಆದರೆ, ತಮ್ಮ ಬೇಡಿಕೆಗಳ ಕುರಿತು ಸರ್ಕಾರ ಸ್ಪಷ್ಟ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದ ಕಾರ್ಯಕರ್ತರು ಪ್ರತಿಭಟನೆಯನ್ನು ಮುಂದುವರಿಸಿದರು. ರಸ್ತೆಯನ್ನು ತೆರವುಗೊಳಿಸಲು ಪಟ್ಟು ಸಡಿಲಿಸದ ಕಾರಣ ಅಂತಿಮವಾಗಿ ಪೊಲೀಸರು ಕಾರ್ಯಪ್ರವೃತ್ತರಾಗಿ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರನ್ನು ವಶಕ್ಕೆ ಪಡೆದು, ಪೊಲೀಸ್ ವಾಹನಗಳಲ್ಲಿ ಕರೆದೊಯ್ದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ದೀಪಕ ಗುಡಗನಟ್ಟಿ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಈ ಪ್ರತಿಭಟನೆಯಲ್ಲಿ ಸುರೇಶ ಗವನ್ನವರ, ಗಣೇಶ ರೋಕಡೆ, ದತ್ತು ಹಕ್ಕ್ಯಾಗೋಳ, ವಿಠ್ಠಲ ಹಿಂಡಲಕರ, ಮಧು ಇಟಗಿ, ಸತೀಶ ಗುಡದವರ, ಬಸವರಾಜ ಕುಲಾರಕೊಪ್ಪ ಸೇರಿದಂತೆ ಹಲವು ಕಾರ್ಯಕರ್ತರು ಪಾಲ್ಗೊಂಡು ಕಬ್ಬು ಬೆಳೆಗಾರರ ಹೋರಾಟಕ್ಕೆ ಧ್ವನಿ ನೀಡಿದರು.



