ಪುಸ್ತಕ ಮನೆ ಖ್ಯಾತಿಯ ಕನ್ನಡಿಗ ಅಂಕೇಗೌಡರಿಗೆ ದೇಶದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕೇಂದ್ರ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ 2026ನೇ ಸಾಲಿನ ಪದ್ಮ ಪ್ರಶಸ್ತಿಗಳ ಪಟ್ಟಿಯನ್ನು ಭಾನುವಾರ ಪ್ರಕಟಿಸಿದ್ದು, ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಅಂಕೇಗೌಡ ಆಯ್ಕೆಯಾಗಿದ್ದಾರೆ.
ಅಂಕೇಗೌಡ ಪರಿಚಯ
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಅಂಕೇಗೌಡರು, ದೊಡ್ಡ ಜ್ಞಾನ ಭಂಡಾರವನ್ನೇ ಸೃಷ್ಟಿಸಿದ್ದಾರೆ. ಪಾಂಡವಪುರದಿಂದ ಕೇವಲ ಒಂದು ಕಿಲೋ ಮೀಟರ್ ದೂರದ ಹರಳಹಳ್ಳಿಯಲ್ಲಿ ಪುಸ್ತಕದ ಮನೆ ನಿರ್ಮಾಣ ಮಾಡಿದ್ದು, ಇಲ್ಲಿ ಲಕ್ಷಗಟ್ಟಲೆ ಪುಸ್ತಕಗಳ ಸಂಗ್ರಹವಿದೆ.
ಒಂದೊಂದೇ ಪುಸ್ತಕ ಸಂಗ್ರಹ ಮಾಡುತ್ತ ಇಂದು ದೊಡ್ಡ ಸಂಗ್ರಹಾಲಯವನ್ನೇ ತೆರೆದಿದ್ದಾರೆ. ಇಲ್ಲಿಗೆ ನೀವು ಬಂದರೆ ಯಾವುದೇ ವಿಷಯದ ಪುಸ್ತಕಗಳನ್ನು ನೋಡಬಹುದು ಜೊತೆಗೆ ಓದಲೂಬಹುದು. ಪ್ರಪಂಚದ ಎಲ್ಲಾ ಪ್ರಮುಖ ಗ್ರಂಥಗಳು ಇಲ್ಲಿ ಸಿಗುತ್ತವೆ.
ಅಂಕೇಗೌಡರ ಪುಸ್ತಕ ಪ್ರೀತಿಗೆ ಕಾರಣವಾಗಿದ್ದು ಶಾಲಾ ಗ್ರಂಥಾಲಯ. ಶಾಲಾ ದಿನಗಳಲ್ಲಿ ಪುಸ್ತಕಕ್ಕಾಗಿ ಗ್ರಂಥಾಲಯಕ್ಕೆ ಹೋದ ಅಂಕೇಗೌಡರಿಗೆ ಶಿಕ್ಷಕರು ಹೇಳಿದ ಆ ಮಾತು, ಇಂದು ವಿಶ್ವದ ದೊಡ್ಡ ಖಾಸಗಿ ಗ್ರಂಥಾಲಯ ನಿರ್ಮಾಣಕ್ಕೆ ಕಾರಣವಾಗಿದೆ. ಶಾಲಾ ದಿನಗಳಲ್ಲಿ ಪುಸ್ತಕಗಳನ್ನು ಮನೆಗೆ ಕೊಡದ ಹಿನ್ನೆಲೆ, ಪುಸ್ತಕ ಸಂಗ್ರಹ ಹಾಗೂ ಖರೀದಿಗೆ ಮುಂದಾದ ಅಂಕೇಗೌಡರು, ಇಂದು ದೊಡ್ಡ ಜ್ಞಾನ ಭಂಡಾರವನ್ನೇ ಸೃಷ್ಟಿಸಿದ್ದಾರೆ.
ಈಗಾಗಲೇ ಈ ಪುಸ್ತಕದ ಮನೆಯು ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರಿಕೊಂಡಿದ್ದು, ಪ್ರತಿಯೊಂದು ಪುಸ್ತಕವೂ ಮೌಲ್ಯಯುತವಾಗಿವೆ. ಸಣ್ಣ ಕಟ್ಟಡದಲ್ಲೇ ಮೊದ ಮೊದಲು ಪುಸ್ತಕ ಮನೆಯನ್ನು ಆರಂಭಿಸಲಾಗಿತ್ತು. ಈಗ ಉದ್ಯಮಿ ಹರಿಕೋಡೆ ಕಟ್ಟಿಕೊಟ್ಟ ಕಟ್ಟಡ ಈ ಮನೆಗೆ ಮತ್ತೊಂದು ಆಯಾಮ ನೀಡಿದೆ. ಅಂಕೇಗೌಡರ ಈ ದೊಡ್ಡ ಸಾಧನೆಗೆ ಅವರ ಪತ್ನಿಯ ಸಹಕಾರವೂ ಇದೆ. ಪುಸ್ತಕಗಳ ಜೋಡಿಸುವಿಕೆಯಿಂದ ಹಿಡಿದು ಸ್ವಚ್ಛತಾ ಕಾರ್ಯದಲ್ಲೂ ಕೈಜೋಡಿಸಿ ಪತಿಯ ಕಾರ್ಯಕ್ಕೆ ಅವರು ಸಹಕಾರ ನೀಡುತ್ತಾ ಬಂದಿದ್ದಾರೆ.
ರಾಜ್ಯ ಸರ್ಕಾರ ಕಟ್ಟಡ ನಿರ್ಮಾಣಕ್ಕೆ ಹಣ ನೀಡಿದ್ದು, ಕಾಮಗಾರಿಯೂ ನಡೆಯುತ್ತಿದೆ. ಆದರೆ ಪುಸ್ತಕಗಳ ನಿರ್ವಹಣೆಗೆ ಸಾಕಷ್ಟು ಅನುದಾನದ ಅವಶ್ಯಕತೆ ಇದೆ. ಕೆಲವೊಂದು ಸಂಸ್ಥೆಗಳು ಅಲ್ಮೇರಾದ ಸಹಾಯ ಮಾಡಿದ್ದು, ಆದರೆ ಈಗಿರುವ ಪುಸ್ತಕಗಳಿಗೆ ಮತ್ತಷ್ಟು ಅಲ್ಮೇರಾಗಳ ಅವಶ್ಯಕತೆಯಿದೆ. ಒಮ್ಮೆ ಈ ಪುಸ್ತಕದ ಮನೆಗೆ ನೀವು ಕಾಲಿಟ್ಟರೆ ಸಾಕು ಪುಸ್ತಕ ಲೋಕವೇ ನಿಮ್ಮ ಕಣ್ಣ ಮುಂದೆ ಬಂದು ಬಿಡುತ್ತದೆ. ಹೊಟ್ಟೆಯ ಹಸಿವಿಗಿಂತ ಜ್ಞಾನದ ಹಸಿವು ನಿಮ್ಮನ್ನು ಕೈಬೀಸಿ ಕರೆಯುತ್ತದೆ. ಪಾಂಡವಪುರ-ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಹೋದರೆ ನಿಮ್ಮನ್ನು ಸೂಜಿಗಲ್ಲಿನಂತೆ ಸೆಳೆಯಲಿದೆ ಈ ಪುಸ್ತಕದ ಮನೆ.
ಪುಸ್ತಕ ಪ್ರೇಮವು ಇಂದು ಅಂಕೇಗೌಡರನ್ನು ಎತ್ತರದ ಸ್ಥಾನದಲ್ಲಿಟ್ಟಿದೆ. ಅಂಕೇಗೌಡರು ಎಂದರೆ ಪುಸ್ತಕ ಮನೆ ಎನ್ನುವಂತೆ ಗುರುತಿಸುವಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಒಂದು ಗ್ರಂಥಾಲಯವನ್ನು ಹುಟ್ಟು ಹಾಕಿದ ಇವರ ಈ ಸಾಧನೆಗೆ ಒಂದು ಸಲಾಂಅನ್ನು ಹೇಳಲೇಬೇಕು.



